
ಮಂಗಳೂರು : ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವ ಸಹೋದರ ಹಾಗೂ ಉದ್ಯಮಿ ಬಿ.ಎಂ. ಮುಮ್ತಾಜ್ ಅಲಿ (52) ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಒಂದು ಸಿಕ್ಕಿದೆ.
ಅಲಿ ಅವರು ಚಲಾಯಿಸುತ್ತಿದ್ದ ಕಾರು ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೂಳೂರಿನಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಬೈಕಂಪಾಡಿಯಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು.
ಘಟನೆಯಿಂದ ಕಾರಿನ ನಂಬರ್ ಪ್ಲೇಟ್ ಅಲ್ಲೇ ಕಳಚಿಬಿದ್ದಿತ್ತು. ಅಪಘಾತದ ಸಂಭವಿಸಿದ ಬಳಿಕವೂ ಮಮ್ತಾಜ್ ಅಲಿ ಅವರು ಕಾರನ್ನು ನಿಲ್ಲಿಸದೇ ಸಾಗಿದ್ದರು ಎಂದು ಬಸ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಲ್ಲದೇ ಅಲಿ ಅವರ ಕಾರು ಮುಂಜಾನೆ 4.40ರ ಸುಮಾರಿಗೆ ಕೂಳೂರು ಸೇತುವೆಯತ್ತ ಸಾಗಿದ ದೃಶ್ಯಗಳು ಸ್ಥಳೀಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಮುಂಜಾನೆ 5.09ರ ಸುಮಾರಿಗೆ ಅವರ ಮಗಳು ಕೂಳೂರು ಸೇತುವೆಯಲ್ಲಿ ಕಾರು ಇರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಜಾನೆ 4.40 ಮತ್ತು 5.09ರ ನಡುವೆ ಅವರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಒಟ್ಟಿನಲ್ಲಿ ಅಲಿ ಅವರ ಬಿಎಂಡಬ್ಲ್ಯು ಕಾರು ನಗರದ ಹೊರವಲಯದ ಕೂಳೂರು ಸೇತುವೆಯಲ್ಲಿ ಪತ್ತೆಯಾಗಿದ್ದರಿಂದ ನದಿಗೆ ಹಾರಿರು ಶಂಕೆ ವ್ಯಕ್ತವಾಗಿದೆ.
ಹೀಗಾಗಿ ಬೆಳಗ್ಗೆ 7 ಗಂಟೆಯಿಂದ ಕೂಳೂರು ಬಳಿ ಫಲ್ಗುಣಿ ನದಿಯಲ್ಲಿ ಶೋಧಕಾರ್ಯ ನಡೆದಿದ್ದು, ಇನ್ನೂ ಅವರ ಸುಳಿವು ಸಿಕ್ಕಿಲ್ಲ.






