
ಚೆ ನ್ನೈ : ಯುವಕನೊಬ್ಬ ಚಲಿಸುತ್ತಿರುವ ರೈಲಿನಲ್ಲಿ ನೃತ್ಯ ಮಾಡುತ್ತ, ಬಾಗಿಲ ಬಳಿ ಕಂಬಿಗಳಿಗೆ ಜೋತುಬಿದ್ದು ನೇತಾಡುತ್ತಿದ್ದಾಗ, ಟ್ರ್ಯಾಕ್ ಬದಿಯಲ್ಲಿದ್ದ ಪಿಲ್ಲರ್‌ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆಯ ವಿಡಿಯೋವನ್ನು ಆತನ ಸ್ನೇಹಿತ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಚೆನ್ನೈನ ಮಾಧವರಂ ಪ್ರದೇಶದ 16 ವರ್ಷದ ಅಭಿಲಾಷ್ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ. ಈತ ಪ್ರತಿನಿತ್ಯ ತನ್ನ ಕಾಲೇಜಿಗೆ ಎಲೆಕ್ಟ್ರಿಕ್ ರೈಲಿನಲ್ಲಿ ಪ್ರಯಾಣಿಸುತ್ತಾನೆ.
ಅಕ್ಟೋಬರ್ 9 ರಂದು, ಸ್ನೇಹಿತರೊಂದಿಗೆ ರೈಲಿನಲ್ಲಿ ಪ್ರಯಾಣಿಸುವಾಗ, ಅಭಿಲಾಷ್ ರೈಲಿನ ಫುಟ್‌ಬೋರ್ಡ್‌ನಲ್ಲಿ ಅಪಾಯಕಾರಿಯಾಗಿ ಸವಾರಿ ಮಾಡಿದ್ದು, ರಾಯಪುರಂ ಮತ್ತು ವಾಷರ್‌ಮನ್‌ಪೇಟ್ ನಡುವೆ ರೈಲು ಹಾದು ಹೋಗುತ್ತಿದ್ದಾಗ ಅಭಿಲಾಷ್ ಪಿಲ್ಲರ್‌ಗಳನ್ನು ದೂಡಲು ಯತ್ನಿಸಿದಾಗ ಈ ಅವಘಡ ಸಂಭವಿಸಿದೆ.
ಆರಂಭದಲ್ಲಿ ಇದನ್ನೇ ಸಾಹಸದಂತೆ ವಿಡಿಯೋ ಮಾಡಿಸಿಕೊಳ್ಳುತ್ತಿದ ಅಭಿಲಾಷ್, ನಂತರ ರೈಲು ವೇಗ ಪಡೆಯುತ್ತಿದ್ದಂತೆ ಅದೇ ವೇಗಕ್ಕೆ ಹೊಂದಿಕೊಳ್ಳಲಾಗದೆ ಪಿಲ್ಲರ್‌ಗೆ ಡಿಕ್ಕಿ ಹೊಡೆದು ರೈಲಿನಿಂದ ಹೊರಬಿದ್ದಿದ್ದಾನೆ. ವಿದ್ಯಾರ್ಥಿಯನ್ನು ಕೂಡಲೇ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ರಾಯಪುರಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
