
ಪುತ್ತೂರು: ಜಾಗದ ತಕರಾರಿಗೆ ಸಂಬಂಧಿಸಿದಂತೆ ವ್ಯಕ್ತಿ ಯೋರ್ವರ ಮೇಲೆ ಮೂವರು ಯುವಕರು ಹಲ್ಲೆ ನಡೆಸಿದ ಘಟನೆ ಅ. 20ರಂದು ಸಂಜೆ ತಿಂಗಳಾಡಿಯಲ್ಲಿ ನಡೆದಿದೆ. ಕೆದಂಬಾಡಿ ಗ್ರಾಮದ ಚಾವಡಿ ನಿವಾಸಿ ರಘುನಾಥ ರೈ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ರಘುನಾಥ ರೈ ಅವರು ಪುತ್ತೂರಿನಲ್ಲಿ ಮದುವೆ ಕಾರ್ಯಕ್ರಮವನ್ನು ಮುಗಿಸಿ ಬಸ್ಸಲ್ಲಿ ಬಂದು ತಿಂಗಳಾಡಿಯಲ್ಲಿ ಇಳಿದು ಅಂಗಡಿಯ ಜಗಲಿಯಲ್ಲಿ ನಿಂತಿದ್ದ ವೇಳೆ ಅಲ್ಲೇ ಕಾಯುತ್ತಿದ್ದ ಮೂವರು ಯುವಕರಾದ ರಘುನಾಥ ರೈ ಅವರ ಅಕ್ಕನ ಮಗ ಸುದೀನ್ ಹಾಗೂ ಅವನ ಸ್ನೇಹಿತರಾದ ನಿಶಾಂತ್ ಮತ್ತು ವಿಜೇತ್ ಎಂಬವರು ರಘುನಾಥ್ ರೈ ಅವರನ್ನು ಹಿಡಿದುಕೊಂಡು ಅವರ ತಲೆಯನ್ನು ಗೋಡೆಗೆ ಜಜ್ಜಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ರಘುನಾಥ್ ರೈ ಅವರ ತಲೆ ಹೊಡೆದು ರಕ್ತ ಸೋರಿಕೆಯಾಗಿದೆ. ಚುನಾವಣಾ ಸಂಬಂಧಿ ಪಂಚಾಯತ್ ಗೆ ಬಂದೋಬಸ್ತಿಗೆ ಬಂದಿದ್ದ ಸಂಪ್ಯ ಠಾಣಾ ಪೊಲೀಸ್ ಓರ್ವರು ಇವರ ಗಲಾಟೆಯನ್ನು ಗಮನಿಸಿ ತಕ್ಷಣವೇ ಸ್ಥಳಕ್ಕೆ ಬಂದು ಆರೋಪಿಗಳನ್ನು ಹಿಡಿದುಕೊಂಡಿದ್ದಾರೆ. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಪಿಗಳನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
