
ಬೆಳಗಾವಿ, ಅಕ್ಟೋಬರ್ 20: ಪತ್ನಿಯಿಂದ ಉದ್ಯಮಿ ಸಂತೋಷ ಪದ್ಮಣ್ಣನ್ನವರ (Businessman Santhosh Padmanannavara) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಪೊಲೀಸರು (Police) ಅವರ ಮನೆ ತಪಾಸಣೆ ನಡೆಸುತ್ತಿದ್ದ ವೇಳೆ ಬರೋಬ್ಬರಿ 13 ಹಾರ್ಡ್ ಡಿಸ್ಕ್ಗಳು ಸಿಕ್ಕಿದ್ದು, ಜಪ್ತಿ ಮಾಡಿದ್ದಾರೆ. ಹಾರ್ಡ್ ಡಿಸ್ಕ್ನಲ್ಲಿ (Hard Disk) ನೂರಾರು ಹೆಣ್ಣುಮಕ್ಕಳ ಜೊತೆಗೆ ತಾನು ಕಳೆದ ಖಾಸಗಿ ಕ್ಷಣದ ವಿಡಿಯೋಗಳು ಇವೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಉದ್ಯಮಿ ಸಂತೋಷ್ ನೂರಾರು ಮಹಿಳೆಯರೊಂದಿಗೆ ಕಳೆದ ಖಾಸಗಿ ಕ್ಷಣವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ನಂತರ ಅವುಗಳನ್ನು ಹಾರ್ಡ್ ಡಿಸ್ಕ್ನಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಪೊಲೀಸರು 13 ಹಾರ್ಡ್ ಡಿಸ್ಕ್, ಮನೆಯ ಸಿಸಿಟಿವಿ ಡಿವಿಆರ್, ಮೂರು ಪೆನ್ ಡ್ರೈವ್ಗಳನ್ನು ವಶಕ್ಕೆ ಪಡೆದು, ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ.
ವಿಡಿಯೋ ಮಾಹಿತಿ ಬೆಳಕಿಗೆ ಬಂದಿದ್ದು ಹೇಗೆ?
ಅಕ್ಟೋಬರ್ 9 ರಂದು ಬೆಳಗಾವಿಯ ಮಹಾಂತೇಶ ನಗರದ ನಿವಾಸಿಯಾದ ಉದ್ಯಮಿ ಸಂತೋಷ ಪದ್ಮಣ್ಣನ್ನವರ ಮೃತಪಟ್ಟಿದ್ದರು. ಸಂತೋಷ ಪದ್ಮಣ್ಣನ್ನವರ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂತ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿ ಮುಸಿಸಿದ್ದರು. ಆದರೆ, ತಂದೆಯ ಸಾವಿನ ಬಗ್ಗೆ ಪುತ್ರಿಗೆ ಅನುಮಾನ ಬಂದಿದೆ.
ಬಳಿಕ, ಉದ್ಯಮಿ ಸಂತೋಷ ಪದ್ಮಣ್ಣನ್ನವರ ಪುತ್ರಿ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಾಯಿ ಉಮಾ ವಿರುದ್ಧ ದೂರು ದಾಖಲಿಸುತ್ತಾರೆ. ಪ್ರಕರಣ ದಾಖಲಿಸಿಕೊಂಡು ಉಮಾ ಅವರನ್ನು ಮಾಳಮಾರುತಿ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಉಮಾ, ತಾನು ಮತ್ತು ಫೇಸ್ಬುಕ್ ಗೆಳೆಯರು ಸೇರಿಕೊಂಡು ಕೊಲೆ ಮಾಡಿರುವುದಾಗಿ ಬಾಯಿ ಬಿಡುತ್ತಾರೆ.
ವಿಚಾರಣೆ ವೇಳೆ ಪತಿ ಸಂತೋಷ ಪದ್ಮಣ್ಣನ್ನವರ ಕಾಮಕಾಂಡವನ್ನು ಪತ್ನಿ ಪೊಲೀಸರ ಮುಂದೆ ಹೇಳಿದ್ದಾಳೆ. ಅಲ್ಲದೇ, ಹಾರ್ಡ್ ಡಿಸ್ಕ್ನಲ್ಲಿರುವ ಅಶ್ಲೀಲ ವಿಡಿಯೋಗಳ ಬಗ್ಗೆಯೂ ಮಾಹಿತಿ ನೀಡಿದ್ದಾಳೆ. ಜೊತೆಗೆ, ಪತಿ ಸಂತೋಷ ಪದ್ಮಣ್ಣನ್ನವರ ಮಕ್ಕಳ ಎದುರು ಬೆತ್ತಲಾಗಿ ಓಡಾಡುತ್ತಿದ್ದರು ಅಂತ ಪೊಲೀಸರ ಮುಂದೆ ಹೇಳಿದ್ದಾಳೆ. ಈ ವಿಡಿಯೋಗಳನ್ನು ಕೂಡ ಉಮಾ ಪೊಲೀಸರಿಗೆ ನೀಡಿದ್ದಾಳೆ. ಕೊಲೆಯಾದ ಸಂತೋಷ ನಿಜ ರೂಪ ತಿಳಿದು ಪೊಲೀಸರು ದಂಗಾಗಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






