
ಲ ಕ್ನೋ: ಗೂಗಲ್ ಲೊಕೇಶನ್‌ನಿಂದ ಒಂದಲ್ಲ ಒಂದು ಅವಘಡಗಳು ನಡೆಯುತ್ತಲೇ ಇದೆ. ಇದಕ್ಕೆ ಉತ್ತರಪ್ರದೇಶದಲ್ಲಿ ನಡೆದ ಘಟನೆಯೂ ಸೇರಿದೆ.
ಉತ್ತರಪ್ರದೇಶದ ಮೌ ಜಿಲ್ಲೆಯ ಚಿರಾಯಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಅ.20) ರಂದು ಬೆಳಗ್ಗೆ ಯುವಕನೊಬ್ಬ ಎರಡನೇ ಮಹಡಿಯಿಂದ ಜಿಗಿದಿರುವ ಮಾಹಿತಿ ಪೊಲೀಸರಿಗೆ ಲಭಿಸಿದಾಗ ಸಂಚಲನ ಉಂಟಾಗಿತ್ತು.
ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಡಯಲ್ 112 ತಂಡವು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಯುವಕನ ಮನೆಯವರು ಆತನನ್ನು ತಮ್ಮ ಜಿಲ್ಲೆಗೆ ಕರೆದೊಯ್ದಿದ್ದಾರೆ.
ನಡೆದಿದ್ದೇನು..?; ಗಾಯಾಳು ಯುವಕನನ್ನು ಬಲ್ಲಿಯಾ ಜಿಲ್ಲೆಯ ಹುಸೇನಾಬಾದ್ ಗ್ರಾಮದ ನಿವಾಸಿ ತುಷಾರ್ ಕುಮಾರ್ ಎಂದು ಗುರುತಿಸಲಾಗಿದೆ. 26 ವರ್ಷದ ಈತ ಮೌ ಜಿಲ್ಲೆಯ ಚಿರಾಯಕೋಟ್ ಪೊಲೀಸ್ ಠಾಣೆಯ ಹಫೀಜ್‌ಪುರ ನಿವಾಸಿ ಯುವತಿ ಜೊತೆ 2 ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಗೆಳೆತನ ಬೆಳೆಸಿದ್ದ. ಈ ಗೆಳೆತನವು ಪ್ರೀತಿಗೆ ತಿರುಗಿತ್ತು. ಅಂತೆಯೇ ಆಕೆ ಯುವಕನನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದು, ಯುವಕ ಒಪ್ಪಿಕೊಂಡಿದ್ದಾನೆ. ಗೆಳತಿ ರಾತ್ರಿಯೇ ಗೆಳೆಯನಿಗೆ ಗೂಗಲ್ ಲೊಕೇಶನ್ ಕಳುಹಿಸಿದ್ದಳು.
ಬಲ್ಲಿಯಾದಿಂದ ಮೌ ಎಂಬಲ್ಲಿಗೆ ಬಂದಿದ್ದ ಈತ ಬೆಳಗ್ಗಿನ ಜಾವ 3 ಗಂಟೆಗೆ ಗೆಳತಿಯ ಮನೆಗೆ ಬಂದಿದ್ದ. ಮನೆಯ ಎರಡನೇ ಮಹಡಿಗೆ ಹತ್ತಿದ ಆತ ತನ್ನ ಗೆಳತಿಯ ಕೋಣೆಗೆ ಹೋಗುವ ಬದಲು ನೇರವಾಗಿ ಆಕೆಯ ತಾಯಿಯ ಕೋಣೆಗೆ ಪ್ರವೇಶಿಸಿದ್ದಾನೆ. ಇತ್ತ ಅಪರಿಚಿತ ಯುವಕನನ್ನು ಕಂಡು ಗೆಳತಿಯ ತಾಯಿಗೆ ಭಯವಾಗಿದೆ. ಕೂಡಲೇ ಜೋರಾಗಿ ಕಿರುಚಿಕೊಂಡಿದ್ದಾರೆ. ಶಬ್ದ ಕೇಳಿ ಅಕ್ಕಪಕ್ಕದ ಮನೆಯವರೂ ಸ್ಥಳಕ್ಕೆ ಬಂದಿದ್ದಾರೆ. ಬಳಿಕ ಯುವಕನನ್ನು ಚೆನ್ನಾಗಿ ಥಳಿಸಿದ್ದಾರೆ. ಈ ಹೊಡೆತದಿಂದ ತಪ್ಪಿಸಿಕೊಳ್ಳಲು ಪ್ರೇಮಿ ಎರಡನೇ ಮಹಡಿಯಿಂದ ಕೆಳಗೆ ಜಿಗಿದಿದ್ದು, ಸದ್ಯ ಯುವಕನ ಸ್ಥಿತಿ ಗಂಭೀರವಾಗಿದೆ.
ಈ ಬಗ್ಗೆ ದೂರು ಬಂದಿಲ್ಲ, ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಚಿರಾಯಕೋಟ್ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಹೇಳಿದ್ದಾರೆ.
