ಮಂಗಳೂರು : ಜಾನುವಾರು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಆರೋಪಿಗಳನ್ನು ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪೇಜಾವರ ಗ್ರಾಮದ ಕೊಳಂಬೆಯ ಕೊಂಚಾರು ಬದ್ರಿಯಾನಗರದ ಫೈಜಲ್ ಅಲಿಯಾಸ್‌ ಫೈಜಲ್ ಕೊಂಚಾರ್ ( 40 ವರ್ಷ) ಹಾಗೂ ಉಳ್ಳಾಲ ಕೋಡಿಯ ಸುಹೈಬ್ ಅಕ್ತರ್ (24 ವರ್ಷ) ಬಂಧಿತರು.

ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಕಾರು ಹಾಗೂ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಟ್ಟಾರಚೌಕಿ ಬಳಿಯ ಮಾಲಾಡಿ ಕೋರ್ಟ್‌ನಲ್ಲಿ ಎರಡು ತಿಂಗಳ ಹಿಂದೆ ಹಾಗೂ ಮೂಡುಶೆಡ್ಡೆಯಲ್ಲಿ 10 ದಿನಗಳ ಹಿಂದೆ ಜಾನುವಾರುಗಳು ಕಳವಾಗಿದ್ದವು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಖಚಿತ ಮಾಹಿತಿ ಆಧಾರದಲ್ಲಿ ಆರೋಪಿ ಫೈಜಲ್‌ ಹಾಗೂ ಸುಹೈಬ್ ಅಕ್ತರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಈ ಕೃತ್ಯ ನಡೆಸಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇನ್ನೂ ಹಲವಾರು ಕಡೆ ಜಾನುವಾರು ಕಳವು ಕೃತ್ಯ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಜಾನುವಾರು ಕಳವು ಸಂಬಂಧ ಬಜ್ಪೆ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು, ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಠಾಣೆಯಲ್ಲಿ ಎರಡು ಪ್ರಕರಣಗಳಲ್ಲಿ ಆರೋಪಿ ಪೈಜಲ್ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದಿದೆ. ಆತನ ವಿರುದ್ಧ ಜಾನುವಾರು ಕಳವು ಸಂಬಂಧ ಈ ಹಿಂದೆ ಒಟ್ಟು 12 ಪ್ರಕರಣ ದಾಖಲಾಗಿವೆ

ಅವುಗಳಲ್ಲಿ ಬಜಪೆ ಠಾಣೆಯಲ್ಲಿ ದಾಖಲಾಗಿದ್ದ ಏಳು ಪ್ರಕರಣಗಳು, ಉಡುಪಿ ಜಿಲ್ಲೆಯ ಶಂಕರನಾರಾಯಣ ಠಾಣೆಯಲ್ಲಿ ದಾಖಲಾಗಿದ್ದ ಒಂದು, ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳು ಸೇರಿವೆ’ ಎಂದು ಮಾಹಿತಿ ನೀಡಿದರು.

ಕಾವೂರು ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರು, ಎಸ್‌ಐ ಮಲ್ಲಿಕಾರ್ಜುನ ಬಿರಾದರ ಹಾಗೂ ಸಿಬ್ಬಂದಿ ಭುವನೇಶ್ವರಿ, ರಿಯಾಜ್, ಚಂದ್ರನಾಯಕ್, ನಾಗರಾಜ ಭೈರಗೊಂಡ. ರಾಜಪ್ಪ ಕಾಶಿಬಾಯಿ ಅವರು ಆರೋಪಿಗಳ ಪತ್ತೆಕಾರ್ಯದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!