ತಿಪ್ಪಗೊಂಡನಹಳ್ಳಿ-ತಾಳೇಕೆರೆ ಮಧ್ಯೆ ಕಂಟೇನರ್‌ ರೂಪದಲ್ಲಿ ಬಂದ ‘ಜವರಾಯ’ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಕುಗ್ರಾಮವೊಂದರಲ್ಲಿ ಹುಟ್ಟಿ ಸಾಫ್ಟ್‌ವೇರ್‌ ಉದ್ಯಮದಲ್ಲಿ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದ್ದ ಯುವ ಉದ್ಯಮಿ ಚಂದ್ರಮ್‌ ಏಗಪ್ಪಗೋಳ ಅವರ ಇಡೀ ಕುಟುಂಬವನ್ನೇ ಬಲಿ ಪಡೆದಿದ್ದಾನೆ.

ಅಪಘಾತದಲ್ಲಿ ಮೃತಪಟ್ಟ ಚಂದ್ರಮ್‌ ಏಗಪ್ಪಗೋಳ ಅವರು ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ (ಎನ್‌ಐಟಿ-ಕೆ) ಎಲೆಕ್ಟ್ರಿಕಲ್‌ ಆಯಂಡ್‌ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದುಕೊಂಡಿದ್ದರು. ಕೆಲವು ವರ್ಷ ವಿದೇಶದಲ್ಲೂ ಕೆಲಸ ಮಾಡಿದ್ದರು.

2015ರ ಸುಮಾರಿಗೆ ನಗರಕ್ಕೆ ಬಂದಿದ್ದ ಅವರು, ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು. ನಂತರ, 2018ರಲ್ಲಿ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಪಾಲುದಾರಿಕೆಯಲ್ಲಿ ಐಎಎಸ್‌ಟಿ ಸಾಫ್ಟ್‌ವೇರ್‌ ಸಲ್ಯೂಷನ್‌ ಸಂಸ್ಥೆ ಆರಂಭಿಸಿದ್ದರು. ಕಂಪನಿಯಲ್ಲಿ 120ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಸಾಫ್ಟ್‌ವೇರ್‌ ಪ್ರೋಗ್ರಾಮಿಂಗ್‌ ಕೆಲಸಗಳನ್ನು ಈ ಕಂಪನಿಯಲ್ಲಿ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬೆಳ್ಳಂದೂರಿನ ಸ್ವಂತ ಮನೆಯಲ್ಲಿ ಚಂದ್ರಮ್ ಅವರು ನೆಲಸಿದ್ದರು. ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಮೊರಬಗಿ ಗ್ರಾಮದಲ್ಲಿ ವಯಸ್ಸಾದ ತಂದೆ ಹಾಗೂ ತಾಯಿ ಇದ್ದರು. ಕೆಲವು ದಿನಗಳಿಂದ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಮಕ್ಕಳಿಗೂ ಕ್ರಿಸ್‌ಮಸ್ ರಜೆಯಿದ್ದ ಕಾರಣಕ್ಕೆ ಪೋಷಕರನ್ನು ನೋಡಲು ಕುಟುಂಬಸ್ಥರ ಜತೆಗೆ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು. ಎರಡು ತಿಂಗಳ ಹಿಂದೆ ₹1 ಕೋಟಿಗೂ ಮೊತ್ತ ನೀಡಿ ಖರೀದಿಸಿದ್ದ ಕಾರಿನಲ್ಲಿ ಹೊರಟಿದ್ದ ಅವರು, ಮಾರ್ಗ ಮಧ್ಯದಲ್ಲಿ ಕೆಲವು ಸ್ಥಳಗಳ ವೀಕ್ಷಣೆಗೂ ಯೋಜನೆ ರೂಪಿಸಿಕೊಂಡಿದ್ದರು. ಎಲ್ಲರೂ ಖುಷಿಯಾಗಿ ತೆರಳುತ್ತಿದ್ದರು. ಆದರೆ, ಆ ಸಂಭ್ರಮ ಹೆಚ್ಚು ಸಮಯ ಉಳಿಯಲಿಲ್ಲ. ಹೆದ್ದಾರಿಯಲ್ಲಿ ಯಮಸ್ವರೂಪಿಯಾಗಿ ಬಂದ ಕಂಟೇನರ್‌ ಆರು ಮಂದಿಯ ಜೀವ ತೆಗೆದಿದೆ. ಕಾರಿನಲ್ಲಿದ್ದ ಮಕ್ಕಳ ಪುಸ್ತಕಗಳು ಘಟನಾ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದ ಭೀಕರ ದೃಶ್ಯ ಕಂಡು ಹಲವರು ಕಣ್ಣೀರು ಹಾಕಿದರು. ಈ ರೀತಿ ಘಟನೆಗೆ ಯಾರನ್ನು ಶಪಿಸುವುದು ಎಂದು ಪ್ರಶ್ನಿಸಿದರು.

ಚಂದ್ರಮ್‌ ಏಗಪ್ಪಗೋಳ ಅವರ ಸಹೋದರ ಮಲ್ಲಿಕಾರ್ಜುನ ಏಗಪ್ಪಗೋಳ ವೈದ್ಯರಾಗಿದ್ದು, ಅವರೂ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾರೆ.

ಹೊಸ ಕಚೇರಿ ತೆರೆಯುವ ಆಲೋಚನೆ: ‘ಚಂದ್ರಮ್‌ ಅವರು ಮತ್ತೊಂದು ಕಚೇರಿ ಆರಂಭಿಸಲು ನಿರ್ಧರಿಸಿದ್ದರು. ಆ ಸಂಬಂಧ ಕೆಲಸಗಳೂ ನಡೆಯುತ್ತಿದ್ದವು. ಶನಿವಾರ ರಾತ್ರಿಯೂ ಕಚೇರಿಯಲ್ಲಿ ಸಭೆ ನಡೆಸಿದ್ದರು. ‘ಊರಿಗೆ ತೆರಳುತ್ತಿದ್ದು, ಕೆಲವು ದಿನ ಕಚೇರಿಗೆ ಬರುವುದಿಲ್ಲ’ ಎಂದು ಹೇಳಿದ್ದರು. ಆದರೆ, ವಿಧಿಯಾಟವೇ ಬೇರೆ ಆಗಿತ್ತು’ ಎಂದು ಸಿಬ್ಬಂದಿ ಕಣ್ಣೀರು ಹಾಕಿದರು.

ಅಪಘಾತದ ಮಾಹಿತಿ ತಿಳಿದು ಶನಿವಾರ ಮಧ್ಯಾಹ್ನದ ಬಳಿಕ ಕಂಪನಿಯ ಉದ್ಯೋಗಿಗಳು ಕೆಲಸ ಸ್ಥಗಿತಗೊಳಿಸಿದರು.

‘ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದ ಮಾಲೀಕರು ದುರಂತವಾಗಿ ಮೃತಪಟ್ಟಿದ್ದಾರೆ. ಗ್ರಾಮೀಣ ಪ್ರದೇಶದಿಂದ ಬಂದು ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಕಂಪನಿ ಕಟ್ಟಿದ್ದರು. ಅವರಿಗೆ ಸಾಕಷ್ಟು ಕನಸುಗಳಿದ್ದವು. ನಿತ್ಯ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದರು’ ಎಂದು ಕಂಪನಿ ಸಿಬ್ಬಂದಿ ಶ್ರೀನಿವಾಸ್‌ ಕಣ್ಣೀರು ಹಾಕಿದರು.

‘ಕಾರಿನ ಮೇಲೆ ಕಂಟೇನರ್ ಬಲವಾಗಿ ಬಿದ್ದಿದ್ದರಿಂದ ತಕ್ಷಣವೇ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಹೆದ್ದಾರಿಯ ಅಲ್ಲಲ್ಲಿ ಆಂಬುಲೆನ್ಸ್‌ ಹಾಗೂ ಕ್ರೇನ್‌ಗಳನ್ನು ನಿಲುಗಡೆ ಮಾಡಬೇಕು. ಇದರಿಂದ ಅಪಘಾತ ಸಂಭವಿಸಿದ ಸಂದರ್ಭಗಳಲ್ಲಿ ಜೀವ ಉಳಿಸಲು ಸಾಧ್ಯವಾಗಲಿದೆ’ ಎಂದು ಪ್ರತ್ಯಕ್ಷದರ್ಶಿ ರವಿಕುಮಾರ್ ತಿಳಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!