ಪುತ್ತೂರು: ಪ್ರಸ್ತುತ ರಾಜಕಾರಣಿಗಳು ಧರ್ಮಬೋಧನೆಗೆ ಮುಂದಾಗಿರುವುದು ದುರಂತವಾಗಿದ್ದು, ಧರ್ಮಗುರುಗಳು ಧರ್ಮವನ್ನು ಬೋಧಿಸಬೇಕು ಹೊರತು ರಾಜಕಾರಣಿಗಳಲ್ಲ ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ತಿಳಿಸಿದರು.
ಅವರು ಪುತ್ತೂರಿನ ಮಾಯ್ ದೇ ದೇವುಸ್ ಚರ್ಚ್ನ ವತಿಯಿಂದ ಚರ್ಚ್ ವಠಾರದಲ್ಲಿ ಬುಧವಾರ ರಾತ್ರಿ ನಡೆದ ಬಂಧುತ್ವ ಕ್ರಿಸ್‌ಮಸ್-ಶಾಂತಿ ಸಂದೇಶ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಅವರು ಸಂದೇಶ ನೀಡಿದರು. ಧರ್ಮದ ಹೆಸರಿನಲ್ಲಿ ಜನರ ಮನಸ್ಸು ಒಡೆಯುವುದರಿಂದ ನಾವು ಯಾವತ್ತು ಹೊರಗೆ ಬರುವುದಿಲ್ಲವೋ ಅಲ್ಲಿಯ ತನಕ ಬಂಧುತ್ವ ಸ್ಥಾಪನೆ ಸಾಧ್ಯವಿಲ್ಲ. ವಿಶ್ವದ ಶಾಂತಿಗಾಗಿ ಧರ್ಮಗಳು ಹುಟ್ಟಿದೆ. ಧರ್ಮದ ನಂಬಿಕೆಗಳಿಗೆ ಹಾನಿ ಮಾಡುವ ಕೆಲಸ ಯಾರಿಂದಲೂ ನಡೆಯಬಾರದು. ದೇವರ ಮೇಲೆ ನಂಬಿಕೆ ಇದ್ದವರು ಮಾತ್ರ ಧಾರ್ಮಿಕ ಸೌಹಾರ್ಧದ ಸಂದೇಶ ನೀಡಲು ಮುಂದಾಗಬೇಕು ಎಂದರು.
ಭಾರತದಲ್ಲಿ ಆರ್ಥಿಕ ಬಡತವಿದೆ ಆದರೆ ಧರ್ಮಗಳಿಗೆ ಬಡತವಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ರಾಮಕೃಷ್ಣ ಪರಮಹಂಸರು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮಗ್ರಂಥಗಳನ್ನು ಅಧ್ಯಯನ ನಡೆಸಿ ಬೈಬಲ್ ಪವಿತ್ರ ಗ್ರಂಥ, ಇಸ್ಲಾಂ ಸತ್ಯದ ಧರ್ಮ ಎಂದಿದ್ದರು ಎಂದು ನೆನಪಿಸಿಕೊಂಡರು.
ಎಸ್‌ಕೆಎಸ್‌ಎಸ್‌ಎಫ್ ಈಸ್ಟ್ ಜಿಲ್ಲಾ ಉಪಾಧ್ಯಕ್ಷ ಪಿ.ಎ. ಝಕರಿಯಾ ಅಸ್ಲಮಿ ಮರ್ದಾಳ ಸಂದೇಶ ನೀಡಿ ಪ್ರತಿಯೊಬ್ಬರೂ ತಾನು ನಂಬಿಕೊAಡು ಬಂದಿರುವ ಧರ್ಮವನ್ನು ಪಾಲಿಸಿಕೊಂಡು, ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಇತರ ಧರ್ಮಗಳನ್ನು ಪ್ರಾಮಾಣಿಕವಾಗಿ ಗೌರವಿಸುವುದೇ ನಿಜವಾದ ಬಂಧುತ್ವ, ಜೀವಾತ್ಮಗಳು ದೇಹದಲ್ಲಿ ಇರುವ ತನಕ ಮಾತ್ರ ಧರ್ಮಗಳಿರುತ್ತದೆ. ಜೀವಾತ್ಮಗಳು ಪರಮಾತ್ಮವನ್ನು ಸೇರಿದಾಗ ನದಿಗಳು ಸಮುದ್ರವನ್ನು ಸೇರಿದಂತೆ ಯಾವುದೇ ಧರ್ಮಗಳು ಕಾಣಿಸಿಕೊಳ್ಳುವುದಿಲ್ಲ. ಟೋಪಿ, ರಾಖಿ, ತಿಲಕಗಳಲ್ಲಿ ಧರ್ಮವಿಲ್ಲ. ಧರ್ಮವಿರುವುದು ಹೃದಯದಲ್ಲಿ ಎಂದರು.
ಪೆರುವಾಯಿ ಫಾತಿಮ ಚರ್ಚ್ನ ಧರ್ಮಗುರು ಫಾ. ಸೈಮನ್ ಡಿಸೋಜ ಬಂಧುತ್ವ ಕ್ರಿಸ್ಮಸ್ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಮಧು ಎಸ್ ಮನೋಹರ್, ಪುತ್ತೂರು ಧರ್ಮಪ್ರಾಂತದ ಶ್ರೇಷ್ಠ ಗುರು ಡಾ. ಎಲ್ಡೋ ಪುತ್ತೆನ್ ಕಂಡತ್ತಿಲ್ ಕೋರ್-ಎಪಿಸ್ಕೋಪ, ಸುಧಾನ ವಿದ್ಯಾಸಂಸ್ಥೆಯ ಸಂಚಾಲಕ ರೆ. ವಿಜಯ ಹಾರ್ವಿನ್, ಪುತ್ತೂರು ಸಾನ್ ತೋಮ್ ಗುರುಮಂದಿರದ ರೆಕ್ಟರ್ ಫಾ. ಜೋಸೆಪ್ ಕೇಳಪರಂಬಿಲ್, ಜಿ.ಎಲ್.ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಎಲ್. ಆಚಾರ್ಯ, ಪುತ್ತೂರು ಕೇಂದ್ರ ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಆಝಾದ್ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ಮಾಯ್ ದೇ ದೇವುಸ್ ಚರ್ಚ್ನ ಧರ್ಮಗುರು ಫಾ. ಲಾರೆನ್ಸ್ ಮಸ್ಕರೇನ್ಹಸ್ ಸ್ವಾಗತಿಸಿದರು.