
✍️ಮೇಘಾ ಪಾಲೆತ್ತಾಡಿ
ಪುತ್ತೂರು; ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದು ಕಾನೂನು ಪ್ರಕಾರ ಅಪರಾಧ. ಶೌಚಾಲಯವಿದ್ದರೂ ಬಾಗಿಲಿಗೆ ಬೀಗ ಜಡಿದು ಬಿಟ್ಟರೆ ಸಾರ್ವಜನಿಕ ಸ್ಥಳದಲ್ಲಿಯೇ ಮೂತ್ರ ವಿಸರ್ಜನೆ ಅನಿವಾರ್ಯ. ಇಂತಹ ಸ್ಥಿತಿಯೊಂದು ಪುತ್ತೂರು ತಾಲೂಕಿನ ಹೃದಯಭಾಗದಲ್ಲಿ ನಿರ್ಮಾಣವಾಗಿದೆ. ಹಾಗಾಗಿ ಇಲ್ಲಿ ಮೂತ್ರ ವಿಸರ್ಜನೆ ಮಾಡುವವರು ಅಲ್ಲಿರುವ ಹಳೆಯ ಕಟ್ಟಡವೊಂದರ ಗೋಡೆ ಬದಿಯನ್ನೇ ಆಶ್ರಯಿಸುವಂತಾಗಿದೆ. ಸುಸಜ್ಜಿತವಾದ ಶೌಚಾಲಯಕ್ಕೆ ಬೀಗ. ಹಾಗಿದ್ದರೆ ಈಗ ಯಾರ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕು. ಇದು ನಾಗರಿಕರ ಪ್ರಶ್ನೆ..!
ಇದು ಪುತ್ತೂರು ಬಸ್‌ನಿಲ್ದಾಣದ ಬಳಿಯಲ್ಲಿನ ಅಟೋರಿಕ್ಷಾ ತಂಗುದಾಣದ ಬಳಿಯಲ್ಲಿ ಕಳೆದ ೬ ತಿಂಗಳಿಂದ ಬಾಗಿಲು ಹಾಕಿಕೊಂಡು ಕುಳಿತ ಶೌಚಾಲಯದ ಕಥೆ. ಅತ್ಯಂತ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಈ ಶೌಚಾಲಯ ಸಾರ್ವಜನಿಕರ ಉಪಯೋಗಕ್ಕೆ ಇನ್ನೂ ತೆರೆದುಕೊಂಡಿಲ್ಲ. ಸುಮಾರು ೧೭ ಲಕ್ಷ ವೆಚ್ಚದಲ್ಲಿ ನಿರ್ಮಿತವಾದ ನಗರಸಭಾ ವ್ಯಾಪ್ತಿಯ ಶೌಚಾಲಯದ ಬಾಗಿಲು ತೆಗೆಯುವ ಭಾಗ್ಯ ಯಾವಾಗ ಬರುತ್ತದೆ ಎಂದು ಜನತೆ ಕಾದುಕುಳಿತಿದ್ದಾರೆ.
ಪುತ್ತೂರು ನಗರಸಭೆಗೆ ಸೇರಿದ ಈ ಶೌಚಾಲಯ ನಿರ್ಮಾಣದ ಕಾಮಗಾರಿ ಕಳೆದ ಮೇ ತಿಂಗಳಲ್ಲಿ ಆರಂಭವಾಗಿತ್ತು. ಕಾಮಗಾರಿ ಮುಗಿದು ಈಗಾಗಲೇ ೬ ತಿಂಗಳು ಕಳೆದಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಇದು ನಿರ್ಮಿತವಾಗಿದೆ. ಆದರೆ ಗುತ್ತಿಗೆದಾರರು ಈ ತನಕ ಶೌಚಾಲಯವನ್ನು ನಗರಸಭೆಗೆ ಹಸ್ತಾಂತರ ಮಾಡಿಲ್ಲವಂತೆ.. ಹಾಗಾಗಿ ಇನ್ನೂ ಶೌಚಾಲಯ ಬೀಗ ಜಡಿದುಕೊಂಡು ಮದುಮಗನಂತೆ ನಿಂತಿದೆ.
ಪೌರಾಯುಕ್ತರ ಪ್ರಕಾರ..
ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಅವರ ಪ್ರಕಾರ ಈ ಶೌಚಾಲಯ ಉತ್ತಮವಾಗಿ ನಿರ್ಮಾಣವಾಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಹಿನ್ನಲೆಯಲ್ಲಿ ಲೋಕಾರ್ಪಣೆಗೊಂಡಿಲ್ಲ. ಗುತ್ತಿಗೆದಾರರು ತಮ್ಮ ಹಣ ಹಾಕಿ ಶೌಚಾಲಯ ನಿರ್ಮಿಸಿದ್ದಾರೆ. ಸರ್ಕಾರಗಳಿಂದ ಈ ಹಣ ಸಿಗದ ಕಾರಣ ನಗರಸಭೆಗೆ ಶೌಚಾಲಯವನ್ನು ಗುತ್ತಿಗೆದಾರರು ಹಸ್ತಾಂತರ ಮಾಡಿಲ್ಲ.
ಹಣವೇ ಮಂಜೂರಾಗದೆ ಕಾಮಗಾರಿ ನಡೆಯಿತಾ..!
ನಗರಸಭೆಗೆ ಸೇರಿದ ಈ ಶೌಚಾಲಯದ ಕಾಮಗಾರಿ ಗುತ್ತಿಗೆದಾರರ ಆಸಕ್ತಿಯಿಂದ ನಡೆಯಿತಾ.. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನ ಮಂಜೂರಾಗದೇ ಈ ಕಾಮಗಾರಿ ನಡೆಸಲು ನಗರಸಭಾ ಅಧಿಕಾರಿಗಳು ಮುಂದಾಗಿರುವುದೇ ಅನುದಾನ ವಿಳಂಬಕ್ಕೆ ಕಾರಣವಾಗಿದೆಯಾ..೧೭ ಲಕ್ಷ ವೆಚ್ಚದ ಕಾಮಗಾರಿಯನ್ನು ಟೆಂಡರ್ ಮೂಲಕ ಪಡೆದುಕೊಂಡು ಗುತ್ತಿಗೆದಾರರು ಕಾಮಗಾರಿ ನಡೆಸಿದ್ದಾರೆ. ಅನುದಾನ ಬರದೆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಎಡವಟ್ಟು ಮಾಡಿಕೊಂಡಿದ್ದಾರೆ ಎನ್ನುವ ಜತೆಗೆ ಸರ್ಕಾರದ ಅನುದಾನ ಬರುವುದು ಗ್ಯಾರಂಟಿ ಆಗಿರುವಾಗ ಅತೀ ಅಗತ್ಯದ ಈ ಮೂಲಭೂತ ಸೌಕರ್ಯವನ್ನು ನಗರಸಭೆಗೆ ಹಸ್ತಾಂತರ ಮಾಡದೇ ಇರುವುದು ಎಷ್ಟು ಸರಿ ಎಂಬ ಹಲವು ಪ್ರಶ್ನೆಗಳು ಜನತೆಯದ್ದಾಗಿದೆ. ಉತ್ತರಿಸಲೇ ಬೇಕಾದ ಜವಾಬ್ದಾರಿ ನಗರಸಭೆಯ ಅಧಿಕಾರಿಗಳದ್ದಾಗಿದೆ. ಸದ್ಯಕ್ಕಂತೂ ಈ ಶೌಚಾಲಯ ಕುಡುಕರಿಗೆ ಆಶ್ರಯತಾಣವಾಗಿದೆ.
ಹಾಗಿದ್ದರೂ ಶೌಚಾಲಯ ಲೋಕಾರ್ಪಣೆ
ಮುಂದಿನ ೧೫ ದಿನಗಳಲ್ಲಿ ಈ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗುವುದು. ಈ ಬಗ್ಗೆ ಗುತ್ತಿಗೆದಾರರಲ್ಲಿ ಮಾತನಾಡಿ ಸಾರ್ವಜನಿಕರ ಮೂಲಭೂತ ಸೌಕರ್ಯವಾದ ಶೌಚಾಲಯವನ್ನು ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳಲಾಗುವುದು. ಸಾರ್ವಜನಿಕರ ಸಮಸ್ಯೆಗೆ ಸ್ಪಂಧಿಸಲಾಗುವುದು- ಮಧು ಎಸ್ ಮನೋಹರ್ ಪೌರಾಯುಕ್ತರು ಪುತ್ತೂರು ನಗರಸಭೆ.






