

ಹಿಂದುತ್ವ ಉಳಿಸಲು ಕತ್ತಿ ಹಿಡಿದು ರಸ್ತೆಗೆ ಇಳಿಯುವ ಅವಶ್ಯಕತೆ ಇಲ್ಲ. ಹಿಂದೂ ಸಮಾಜದ ಸಂಸ್ಕೃತಿ ಇತಿಹಾಸ ಪರಂಪರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅವುಗಳನ್ನು ಮಕ್ಕಳಿಗೆ ಕಲಿಸುವುದರಿಂದಲೂ ಹಿಂದುತ್ವವನ್ನು ಉಳಿಸಿ ಬೆಳೆಸಲು ಸಾಧ್ಯ’ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.
ಇಲ್ಲಿ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಹಾಗೂ ಅದರ ಪದಗ್ರಹಣ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವುದೇ ಸಮಾಜದ ಕೊಡುಗೆಯೂ ಸಣ್ಣದಲ್ಲ. ಅದನ್ನು ಗುರುತಿಸುವ ವ್ಯವಸ್ಥೆ ನಮ್ಮದಾಗಬೇಕು. ಸಣ್ಣ ಸಮಾಜಗಳಿಗೆ ಧ್ವನಿ ಕೊಡುವ ಕೆಲಸವನ್ನು ರಾಜಕೀಯ ಪಕ್ಷಗಳು ಹಾಗೂ ಸರ್ಕಾರ ಮಾಡಬೇಕು. ದೇಶದ ಪ್ರಜೆಗಳಿಗೆ ನರೇಂದ್ರ ಮೋದಿಯಂತಹ ವ್ಯಕ್ತಿತ್ವನ್ನು ಗಾಣಿಗ ಸಮಾಜ ನೀಡಿದೆ. ಅದಕ್ಕೆ ಧನ್ಯವಾದ ಹೇಳಲೇ ಬೇಕು’ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್, ‘ಸರಳತೆ ಗಾಣಿಗ ಸಮಾಜವು ನೀಡಿದ ದೊಡ್ಡ ಕೊಡುಗೆಯಾಗಿದೆ. ಎಲ್ಲರೂ ಆಡಂಬರದ ಮದುವೆಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದಾರೆ. ಆದರೆ ದೇವರ ಮೇಲೆ ವಿಶೇಷ ಭಕ್ತಿ ಹೊಂದಿರುವ ಗಾಣಿಗ ಸಮಾಜದವರು ಸರಳ ವಿವಾಹದ ಪರಂಪರೆ ಮುಂದುವರೆಸುವ ಮೂಲಕ ಉತ್ತಮ ಸಂದೇಶ ನೀಡಿದ್ದಾರೆ’ ಎಂದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ‘ಹಿಂದೂ ಸಮಾಜಕ್ಕೆ ಗಾಣಿಗ ಸಮಾಜ ಶಕ್ತಿ ತುಂಬಿದೆ’ ಎಂದು ಹೇಳಿದರು.
ಸಾಧಕರಾದ ಬಣ್ಣದ ಸುಬ್ರಾಯ, ನಾರಾಯಣ ಪಾಟಾಳಿ, ಕರ್ನಲ್ ಬಾಲಕೃಷ್ಣ, ಗಿರಿಜಾ ಪಟ್ಟೆ, ಜಯರಾಮ್ ಪಡುಮಲೆ, ಗೋಪಾಲಕೃಷ್ಣ ಈಶ ಅವರನ್ನು ಸಮ್ಮಾನಿಸಲಾಯಿತು.
ದ.ಕ. ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ರಾಮ ಮುಗ್ರೋಡಿ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್, ಪೊಲೀಸ್ ಇನ್ಸ್‌ಸ್ಪೆಕ್ಟರ್ ಪ್ರಕಾಶ್ ಕೆ., ಸ್ವಿಗ್ಗಿ ಸಾಫ್ಟ್‌ವೇರ್ ವಿಭಾಗದ ನಿರ್ದೇಶಕ ಪ್ರೀತಂ ಕೆ.ಎಸ್, ಕಾಸರಗೋಡು ಉದ್ಯಮಿ ಸುರೇಶ್ ಬಟ್ಟಂಪಾರೆ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶಂಕರೀ ಪಟ್ಟೆ, ನಿವೃತ್ತ ಉಪನ್ಯಾಸಕಿ ಸುಕನ್ಯಾ ದೇಲಂತಬೆಟ್ಟು, ಕಿರುತೆರೆ ನಟ ಕೌಶಿಕ್ ರಾಮ್, ಪ್ರಧಾನ ಕಾರ್ಯದರ್ಶಿ ಮಹಾಲಿಂಗನ್ ಬಾಜರ್ತೊಟ್ಟಿ ಭಾಗವಹಿಸಿದ್ದರು.
ಗೌರವಾಧ್ಯಕ್ಷ ಎಸ್.ಶಂಕರ ಪಾಟಾಳಿ ಮುಕ್ರಂಪಾಡಿ ಸ್ವಾಗತಿಸಿದರು. ಉಪಾಧ್ಯಕ್ಷೆ ಶಾರದಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾಮೋದರ ಪಾಟಾಳಿ ಪುತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ ಪನ್ನೆ ವಂದಿಸಿದರು.
