
ವಿಟ್ಲ :ನಕಲಿ ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ವಂಚನೆ ಮಾಡಿರುವ ಪ್ರಕರಣಗಳ ಬಗ್ಗೆ ಕೇಳಿರುತ್ತೀರಿ, ಆದರೆ ಇದೀಗ ದರೋಡೆಕೋರರು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ಸೋಗಿನಲ್ಲಿ ಬಂದು ಬರೋಬ್ಬರಿ 30 ಲಕ್ಷ ರೂ. ಲೂಟಿ ಮಾಡಿರುವ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ.
ಸುಮಾರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿ
ಸುಲೈಮಾನ್ ಹಾಜಿ ಅವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಇವರ ಮನೆಗೆ ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ದಾಳಿ ಮಾಡಿದ್ದಾರೆ. ಅದನ್ನು ಉದ್ಯಮಿಯೂ ನಂಬಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ತನಿಖೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಸುಮಾರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ
ತಡರಾತ್ರಿ ಸುಲೈಮಾನ್ ಹಾಜಿ ಅವರ ಮನೆಗೆ ತಮಿಳುನಾಡು ಮೂಲದ ತಂಡ ಕಾರ್ ನಲ್ಲಿ ಆಗಮಿಸಿದೆ. ತಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳವರೆಗೆ ತನಿಖೆ ನಡೆಸಿದ್ದಾರೆ. ಅವರನ್ನು ಇಡಿ ಅಧಿಕಾರಿಗಳೇ ಎಂದು ನಂಬಿದ ಉದ್ಯಮಿಯು ಸಹಕರಿಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಸುಮರು 30 ಲಕ್ಷ ರೂಪಾಯಿಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಬಂಟ್ವಾಳ ತಾಲ್ಲೂಕಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪ ನಡೆದಿದೆ.
ಸ್ಥಳಕ್ಕೆ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ
ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಧ್ಯ ಸ್ಥಳಕ್ಕೆ ದ.ಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಫ್‌ಐಆರ್ ನಲ್ಲಿ ಏನಿದೆ?
ಪ್ರಕರಣದ ಪಿರ್ಯಾದಿದಾರರಾದ ಬಂಟ್ವಾಳ ಕೊಳ್ನಾಡು ನಿವಾಸಿ ಮಹಮ್ಮದ್ ಇಕ್ಬಾಲ್ (27) ಎಂಬವರ ದೂರಿನಂತೆ, ಸದ್ರಿಯವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಅವರ ತಂದೆ ಬೀಡಿ ಉದ್ಯಮವನ್ನು ನಡೆಸುತ್ತಿರುತ್ತಾರೆ. ಸದ್ರಿಯವರ ಮನೆಗೆ ದಿನಾಂಕ:03-01-2025 ರಂದು ರಾತ್ರಿ 8.10 ರ ಸುಮಾರಿಗೆ, ತಮಿಳುನಾಡಿನ ನೋಂದಣೆ ಹೊಂದಿರುವ ಕಾರಿನಲ್ಲಿ 6 ಜನ ಅಪರಿಚಿತ ವ್ಯಕ್ತಿಗಳು ಬಂದು, ತಮ್ಮನ್ನು ಇ.ಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ಪಿರ್ಯಾದಿರವರ ಮನೆಯನ್ನು ಪರಿಶೀಲನೆ ನಡೆಸಲು ಅದೇಶವಾಗಿರುತ್ತದೆ ಎಂಬುದಾಗಿ ತಿಳಿಸಿ ಮನೆಗೆ ಪ್ರವೇಶಿಸಿ, ಮನೆ ಮಂದಿಯ 5 ಮೊಬೈಲ್ ಪೊನ್ ಗಳನ್ನು ಪಡೆದುಕೊಂಡು ಬಳಿಕ ಮನೆಯನ್ನು ಹುಡುಕಾಡಿರುತ್ತಾರೆ. ಈ ವೇಳೆ ಪಿರ್ಯಾದಿದಾರರ ತಂದೆಯವರ ಕೊಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು 25 ರಿಂದ 30 ಲಕ್ಷ ಹಣವನ್ನು ಪಡೆದುಕೊಂಡು, “ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ, ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ ಮತ್ತು ಕಸ್ಟಡಿ ತೆಗೆದುಕೊಳ್ಳುತ್ತೇನೆʼʼ ಎಂಬುದಾಗಿ ಹೇಳಿರುತ್ತಾರೆ. ರಾತ್ರಿ ಸುಮಾರು 10.30 ಗಂಟೆಗೆ ಆರೋಪಿಗಳು ಪಿರ್ಯಾದಿದಾರರ ಮನೆಯಿಂದ ಹೊರಬಂದು ತಾವುಗಳು ಪಡೆದುಕೊಂಡಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ, ಸದ್ರಿ ಹಣವನ್ನು ಬೆಂಗಳೂರಿನಲ್ಲಿರುವ ಆಫೀಸಿನಿಂದ ಪಡೆದುಕೊಳ್ಳುವಂತೆ ತಿಳಿಸಿ ಹೋಗಿರುತ್ತಾರೆ. ಈ ಬಗ್ಗೆ ಪಿರ್ಯಾಧಿದಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದಾಗ ಅಪರಿಚಿತ ವ್ಯಕ್ತಿಗಳು ಇ.ಡಿ ಅಧಿಕಾರಿಗಳಂತೆ ನಟಿಸಿ ಪಿರ್ಯಾದಿದಾರರ ಮನೆಯಿಂದ ಸುಮಾರು 25 ರಿಂದ 30 ಲಕ್ಷ ಹಣವನ್ನು ಮತ್ತು 5 ಮೊಬೈಲ್ ಪೊನ್ ಗಳನ್ನು ಪಡೆದುಕೊಂಡು ವಂಚನೆ ಮಾಡಿರುವುದು ತಿಳಿದು ಬಂದಿರುತ್ತದೆ, ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 02/2025 ಕಲಂ: 319(2), 318(4) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಸದ್ರಿ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಯತೀಶ್ ಎನ್, ಐ.ಪಿ.ಎಸ್ ರವರು ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳ ಪತ್ತೆಗಾಗಿ ಸೂಕ್ತ ಸಲಹೆ/ಸೂಚನೆ ನೀಡಿದರು.






