ಲಾಸ್ ಏಂಜಲೀಸ್: ಅಮೆರಿಕದ ಪಶ್ಚಿಮ ರಾಜ್ಯ ಕ್ಯಾಲಿಪೋರ್ನಿಯಾದಲ್ಲಿ ನ ಲಾಸ್‌ ಏಂಜಲೀಸ್‌ನಲ್ಲಿ ಸಂಭವಿಸಿರುವ ಭೀಕರ ಕಾಳ್ಗಿಚ್ಚು ನಿಲ್ಲುವಂತೆ ಕಾಣುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬುಧವಾರವೂ ಮತ್ತೆ ನಗರದ ಹಲವು ಕಡೆಗೆ ಬಿಸಿ ಗಾಳಿ ಬೀಸುವ ಮುನ್ಸೂಚನೆ ಕಂಡು ಬಂದಿದ್ದು ಮತ್ತಷ್ಟು ಜನರಿಗೆ ‘ನೀವು ಸ್ಥಳಾಂತರವಾಗಲು ಸಿದ್ದರಾಗಿರಿ, ಏನಾದರೂ ಆಗಬಹುದು.ದಹಿಸುವ ವಸ್ತುಗಳನ್ನು ಕಾಳ್ಗಿಚ್ಚಿನಿಂದ ರಕ್ಷಿಸಿ’ ಎಂದು ಸ್ಥಳೀಯಾಡಳಿತ ಜನರಲ್ಲಿ ಮನವಿ ಮಾಡಿದೆ.

ಅಮೆರಿಕದ ನ್ಯಾಷನಲ್ ವೆದರ್ ಸರ್ವಿಸ್ ಸಂಸ್ಥೆ ಲಾಸ್ ಏಂಜಲೀಸ್ ಕಾಳ್ಗಿಚ್ಚನ್ನು ವಿಶೇಷವಾದ ಅಪಾಯಕಾರಿ ಹಾಗೂ ಸರ್ವನಾಶದ ಪರಿಸ್ಥಿತಿ ಎಂದು ಬಣ್ಣಿಸಿದೆ.

ಬುಧವಾರವೂ ಬಿಸಿಗಾಳಿ ಬೀಸುವುದರಿಂದ ಕಾಳ್ಗಿಚ್ಚು ವ್ಯಾಪಿಸಬಹುದು ಎಂದು ಲಾಸ್ ಏಂಜಲೀಸ್ ಮೇಲೆ ಕೆಂಪು ಬಾವುಟ (ಡಿಜಿಟಲ್) ಘೋಷಣೆ ಮಾಡಲಾಗಿದೆ.

ಲಾಸ್‌ ಏಂಜಲೀಸ್‌ನಲ್ಲಿ ‘ಸಂತಾ ಆನಾ’ ಸುಂಟರಗಾಳಿಯು ಎಬ್ಬಿಸಿದ ಕಾಳ್ಗಿಚ್ಚನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸೋಮವಾರವೂ ಹರಸಾಹಸಪಟ್ಟರು.

ಕಾಳ್ಗಿಚ್ಚಿನಿಂದಾಗಿ ಈ ಪ್ರದೇಶದಲ್ಲಿ ಈಗಾಗಲೇ 24 ಮಂದಿ ಮೃತಪಟ್ಟಿದ್ದು, ಸಾವಿರಾರು ಮನೆಗಳು ಸುಟ್ಟು ಕರಕಲಾಗಿವೆ. ಮೃತರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಾರ ಮತ್ತೆ ಬಲವಾದ ಮಾರುತಗಳು ಬೀಸಲಿವೆ ಎಂದು ಹವಾಮಾನ ಇಲಾಖೆಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಗಾಳಿಯು ಗಂಟೆಗೆ 80 ಕಿ.ಮೀ. ವೇಗದಲ್ಲಿ ಬೀಸುತ್ತಿದೆ. ಪರ್ವತ ಪ್ರದೇಶದಲ್ಲಿ ಅದರ ವೇಗವು ಗಂಟೆಗೆ 113 ಕಿ.ಮೀ.ನಷ್ಟಿದೆ. ಬುಧವಾರ ಲಾಸ್‌ ಏಂಜಲೀಸ್‌ ಜನರ ಪಾಲಿಗೆ ಅತ್ಯಂತ ಅಪಾಯಕಾರಿ ದಿನ ಆಗಿರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!