
ಪ್ರೀತಿಸಿ ವಿವಾಹವಾಗಿದ್ದ (Love Marriage) ಜೋಡಿಯನ್ನು ನಡು ರಸ್ತೆಯಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆ (Murder) ಮಾಡಿದ್ದ ನಾಲ್ವರು ಆರೋಪಿಗಳಿಗೆ (Criminals) ಮರಣದಂಡನೆ (Death penalty) ಶಿಕ್ಷೆ ವಿಧಿಸಿ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Gadag Court) ಆದೇಶ ಹೊರಡಿಸಿದೆ.
2019ರಲ್ಲಿ ನಡೆದಿದ್ದ ಪ್ರಕರಣ
ಗದಗದಲ್ಲಿ 2029 ರಲ್ಲಿ ನಡೆದಿದ್ದ ಮರ್ಯಾದೆ ಹತ್ಯೆ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಆದೇಶ ಹೊರಡಿಸಿದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ನಡೆದಿದ್ದ ಘಟನೆ ಇದಾಗಿದ್ದು, ಎಲ್ಲಾ ನಾಲ್ವರು ಅಪರಾಧಿಗಳಿಗೂ ಶಿಕ್ಷೆ ವಿಧಿಸಿದೆ.
ಪ್ರೀತಿಸಿ ಅಂತರಜಾತಿ ವಿವಾಹವಾಗಿದ್ದ ಜೋಡಿ
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಜೋಡಿ ರಮೇಶ ಮಾದರ ಮತ್ತು ಗಂಗಮ್ಮ ಮಾದರ ಪ್ರೀತಿಸಿ ಮದುವೆಯಾಗಿದ್ದರು. ಈ ಇಬ್ಬರನ್ನೂ 2019ರ ನವೆಂಬರ್ 6ರಲ್ಲಿ ಗಂಗಮ್ಮ ಕುಟುಂಬಸ್ಥರು ಬರ್ಬರವಾಗಿ ಕೊಲೆ ಮಾಡಿದ್ದರು. ಕುಟುಂಬಸ್ಥರ ವಿರೋಧ ನಡುವೆ ಗಂಗಮ್ಮ ಪ್ರೀತಿಸಿ ಅಂತರಜಾತಿ ವಿವಾಹ ಆಗಿದ್ದಕ್ಕೆ ಗಂಗಮ್ಮ ಸಂಬಂಧಿಕರು ಕೊಲೆ ಮಾಡಿದ್ದರು.
ದೋಷಾರೋಪಣ ಪಟ್ಟಿ ಸಲ್ಲಿಸಿದ್ದ ಪೊಲೀಸರು
ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ 427, 449, 302, 506(2) ಅಡಿಯಲ್ಲಿ ನ್ಯಾಯಾಲಕ್ಕೆ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಲಯವು ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಶಿವಪ್ಪ ರಾಠೋಡ, ರವಿಕುಮಾರ ರಾಠೋಡ, ರಮೇಶ ರಾಠೋಡ ಹಾಗೂ ಸಾರಿಗೆ ಇಲಾಖೆ ಚಾಲಕ ಪರಶುರಾಮ ರಾಠೋಡಗೆ ಮರಣ ದಂಡನೆ ವಿಧಿಸಿದೆ.






