
ಪುತ್ತೂರು; ತೋಟದಲ್ಲಿ ಎಳನೀರು ಕೊಯ್ಯುತ್ತಿದ್ದಾಗ ಯುವಕನೋರ್ವ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪ ಬುಧವಾರ ನಡೆದಿದೆ.
ಮೃತಯುವಕ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಗಟ್ಟೆ ನಿವಾಸಿ ಗುತ್ಯಪ್ಪ ಮತ್ತು ಶಾಂತಮ್ಮ ದಂಪತಿಗಳ ಪುತ್ರ ವೀರಭದ್ರ (೨೯).
ಉಪ್ಪಿನಂಗಡಿ ಸಮೀಪದ ಮಠ ಸಫಾ ನಗರ ಎಂಬಲ್ಲಿ ತೋಟದಲ್ಲಿ ಅಲ್ಯೂಮಿನಿಯಂ ದೋಟಿಯಿಂದ ಎಳನೀರು ಕೀಳುತ್ತಿದ್ದಾಗ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಸಂಪರ್ಕಿಸಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಯುವಕ ಮೃತಪಟ್ಟಿದ್ದಾನೆ. ಕನಿಷ್ಟ ಕೂಲಿಕಾರ್ಮಿಕನ್ನು ನೋಡಲೂ ಬಾರದ ತೋಟದ ಯಜಮಾನ ಅಮಾನವೀಯತೆ ತೋರಿಸಿದ್ದಾಗಿ ಆರೋಪ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮೃತ ಯುವಕ ತಂದೆ ತಾಯಿ ಪತ್ನಿ ಆಶಾ ಹಾಗೂ ಒಂದು ವರ್ಷದ ಪುಟ್ಟ ಮಗುವನ್ನು ಅಗಲಿದ್ದಾನೆ.