
ಪುತ್ತೂರು; ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ಮಂಡನೆ ಮಾಡಲಿರುವ ರಾಜ್ಯ ಬಜೆಟ್ ನಲ್ಲಿ ಪುತ್ತೂರಿಗೆ `ಮೆಡಿಕಲ್ ಕಾಲೇಜ್’ ಬಹುತೇಕ ಖಚಿತ ಎಂದು `ವಿದ್ಯಾಮಾನ’ ಗುರುವಾರವೇ ವರದಿ ಮಾಡಿತ್ತು. ಇದೀಗ ವಿದ್ಯಾಮಾನದ ಭವಿಷ್ಯ ನಿಜವಾಗಿದೆ. ಬಜೆಟ್ ನಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಪ್ರಸ್ತಾಪವಾಗಿದೆ. ಆ ಮೂಲಕ ಪುತ್ತೂರಿನ ಜನತೆಯ ದಶಕಗಳ ಕನಸನ್ನು ರಾಜ್ಯ ಸರ್ಕಾರ ನನಸು ಮಾಡಿದೆ.
ರೈ ಹೋರಾಟಕ್ಕೆ ದೊರೆತ `ಪೂಜಾಫಲ’
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಗೆ ಶಾಸಕ ಅಶೋಕ್ ರೈ ಅವರ ಶ್ರಮ ಬಹಳ ದೊಡ್ಡದಿದೆ. ಅವರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಅವರು ಇದೀಗ ಮೆಡಿಕಲ್ ಕಾಲೇಜಿನ ಘೋಷಣೆ ಮಾಡಿದ್ದಾರೆ. ಶಾಸಕನಾದ ಬಳಿಕ ಪ್ರತಿಯೊಂದು ಭಾಷಣದಲ್ಲಿಯೂ ಮೆಡಿಕಲ್ ಕಾಲೇಜಿನ ಪ್ರಸ್ತಾಪ ಮಾಡುತ್ತಿದ್ದ ಅಶೋಕ್ ರೈ ಅವರು ಅದಕ್ಕಾಗಿ ಬೆಂಗಳೂರಿನ ಕಚೇರಿ ಕಚೇರಿಗಳನ್ನು ಅಲೆದಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರನ್ನು ಇನ್ನಿಲ್ಲದೆ ಕಾಡಿದ್ದಾರೆ. ಪ್ರತಿಫಲವಾಗಿ ಇದೀಗ ರೈ ಪಾಲಿಗೆ ದೊರೆತಿದೆ `ಪೂಜಾಫಲ’
ಪುತ್ತೂರಿನಲ್ಲೊಂದು ಮೆಡಿಕಲ್ ಕಾಲೇಜು ಅಗತ್ಯವಿದೆ ಎಂಬ ಚಿಂತನೆ ಆರಂಭಗೊAಡಿರುವುದು ದಶಕಗಳ ಹಿಂದೆ. ಇದಕ್ಕೆ ಪೂರಕವಾಗಿ ಆಗಿನ ಶಾಸಕಿ ಶಕುಂತಳಾ ಶೆಟ್ಟಿ ಅವರು ಭವಿಷ್ಯದ ಮೆಡಿಕಲ್ ಕಾಲೇಜಿಗಾಗಿ ಜಾಗವನ್ನು ಕಾದಿರಿಸಿದ್ದರು. ಬಳಿಕ ಬಂದ ಶಾಸಕರು ಈ ಬಗ್ಗೆ ಹಚ್ಚೇನು ಮುತುವರ್ಜಿ ವಹಿಸಲಿಲ್ಲ. ಹಾಗಾಗಿ ಈ ವಿಚಾರ ನೆನೆಗುದಿಗೆ ಬಿದ್ದಿತ್ತು. ಆಗ ಆರಂಭವಾದ್ದೇ ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ. ಮೆಡಿಕಲ್ ಕಾಲೇಜಿಗಾಗಿ ಜನಾಭಿಪ್ರಾಯ ಕ್ರೂಢೀಕರಿಸಿದ ಈ ಸಮಿತಿ ಹೋರಾಟವನ್ನೂ ನಡೆಸಿತ್ತು. ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಝೇವಿಯರ್ ಡಿಸೋಜ, ವಿಶ್ವಪ್ರಸಾದ್ ಸೇಡಿಯಾಪು, ಪ್ಯಾಟ್ರಿಕ್ ಸಿಪ್ರಿಯಾನ್, ಅಮಲ ರಾಮಚಂದ್ರ, ದಿನೇಶ್ ಭಟ್, ರಾಜೇಶ್ ಶರ್ಮ ಸೇರಿದಂತೆ ದೊಡ್ಡದೊಂದು ತಂಡದ ಒತ್ತಾಸೆ ಮೆಡಿಕಲ್ ಕಾಲೇಜಿನ ನಿರ್ಮಾಣ ಚಿಂತನೆಗೆ ದೊಡ್ಡ ಕೊಡುಗೆ ನೀಡಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.7ರಂದು ರಾಜ್ಯ ಬಜೆಟ್ ಮಂಡನೆಯಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ
ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಿ ಪ್ರಸಕ್ತ ವರ್ಷದಲ್ಲಿ ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ತಿಳಿಸಿದ್ದಾರೆ

