
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಡಿಗ್ರಿ ಕಾಲೇಜಿನ ಹಿರಿಯ ಪ್ರಾಧ್ಯಾಪಕನ ವಿರುದ್ಧ ಕಳೆದ 20 ವರ್ಷಗಳಿಂದ ಮಹಿಳಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಕಿರುಕುಳ ಮತ್ತು ಶೋಷಣೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.
ಆರೋಪಿ ಪ್ರಾಧ್ಯಾಪಕ ರಜನೀಶ್ ಕುಮಾರ್ (59) ಅವರು ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದರು ಎಂದು ಆರೋಪಿಸಲಾಗಿದ್ದು, ಅವರ 59 ವೀಡಿಯೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.
ಈ ಪ್ರಕರಣವು ಹತ್ರಾಸ್ ಮಾತ್ರವಲ್ಲದೆ ಲಕ್ನೋದಲ್ಲೂ ಗಮನ ಸೆಳೆದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರಿಗೆ ಕಠಿಣ ಮತ್ತು ತಕ್ಷಣದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಹತ್ರಾಸ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಚಿರಂಜೀವ್ ನಾಥ್ ಸಿನ್ಹಾ ಅವರು, ಯಾವುದೇ ಸಂತ್ರಸ್ತರು ಮುಂದೆ ಬಾರದ ಕಾರಣ ಸಬ್-ಇನ್‌ಸ್ಪೆಕ್ಟರ್ ದೂರಿನ ಆಧಾರದ ಮೇಲೆ ಗುರುವಾರ (ಮಾರ್ಚ್ 13) ಹತ್ರಾಸ್ ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಇನ್ನು ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಸಂತ್ರಸ್ತರನ್ನು ಗುರುತಿಸಿ, ಅವರ ಹೇಳಿಕೆ ದಾಖಲಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
