
ಕಳೆದ ಒಂಭತ್ತು ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್)ದಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಫ್ಲಾರಿಡಾದ ಕಡಲ ತೀರಕ್ಕೆ ಬಂದಿಳಿದಿದ್ದಾರೆ.
ಸುನೀತಾ ವಿಲಿಯಮ್ಸ್ , ಬುಚ್ ವಿಲ್ಮೋರ್, ನಿಕ್ ಹೇಗ್ , ಅಲೆಕ್ಸಾಂಡರ್ ಗೊರ್ಬನೊವ್ ಅವರಿದ್ದ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ಯಾಪ್ಸುಲ್ ಫ್ಲಾರಿಡಾದ ಕಡಲ ತೀರಕ್ಕೆ ಬಂದಿಳಿದಿದೆ.
ನಾಸಾ ಹಾಗೂ ಸ್ಪೇಸ್ ಎಕ್ಸ್‌ನ ಜಂಟಿ ಪ್ರಯತ್ನ ಯಶಸ್ವಿಯಾಗಿದೆ.
ಸ್ಪೇಸ್‌ಎಕ್ಸ್‌ನ ‘ಫಾಲ್ಕನ್ 9’ ರಾಕೆಟ್ ಮೂಲಕ ಫ್ಲಾರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ಕಳೆದ ಶುಕ್ರವಾರ ರಾತ್ರಿ 7.03ಕ್ಕೆ ನಭಕ್ಕೆ ಚಿಮ್ಮಿದ್ದ ‘ಡ್ರ್ಯಾಗನ್’ ಹೆಸರಿನ ಗಗನನೌಕೆಯನ್ನು ರವಿವಾರ ಬೆಳಿಗ್ಗೆ ಐಎಸ್‌ಐಎಸ್‌ಗೆ ಡಾಕಿಂಗ್ (ಜೋಡಣೆ) ಮಾಡಲಾಗಿತ್ತು. ಸ್ಪೇಸ್‌ಎಕ್ಸ್ ಡ್ರ್ಯಾಗನ್ ಗಗನನೌಕೆಯಲ್ಲಿ ತೆರಳಿದ ನಾಸಾದ ಆಯನ್ ಮೆಕ್ಲೀನ್ ಮತ್ತು ನಿಕೋಲ್ ಅಯೇರ್ಸ್, ಜಾಕ್ಸಾ ಗಗನಯಾನಿ ತಕುಯೊ ಒನಿಶಿ ಮತ್ತು ರೊಸ್ಕೋಸ್ಮಸ್ ನ ಕಿರಿಲ್ ಪೆಸ್ಕೋವ್ ಅವರು ಒಬ್ಬೊಬ್ಬರಾಗಿ ಐಎಸ್‌ಎಸ್ ಪ್ರವೇಶಿಸಿದ್ದರು.
2024ರ ಜೂನ್ 5ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. 8 ದಿನಗಳ ಕಾರ್ಯಾಚರಣೆಗಾಗಿ ತೆರಳಿದ್ದ ಇವರು ಆ ಬಳಿಕ ಭೂಮಿಗೆ ಮರಳಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳಿಂದ ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಸ್ಟಾರ್‌ಲೈನರ್ ಭೂಮಿಗೆ ಮರಳಿತು. ಇದಾದ ಬಳಿಕ ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಪ್ರಯತ್ನ ಹಲವು ಬಾರಿ ನಡೆದಿವೆ.
ಆದರೆ, ಅದು ವಿಫಲವಾಗಿತ್ತು. ಇದೀಗ ನಾಸಾ ಮತ್ತು ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಜಂಟಿ ಕಾರ್ಯಾಚರಣೆಯ ಫಲವಾಗಿ ಗಗನಯಾತ್ರಿಗಳನ್ನು ಯಶಸ್ವಿಯಾಗಿ ಭೂಮಿಗೆ ಕರೆ ತರಲಾಗಿದೆ.
