
ವಿಧಾನಸಭೆಯಲ್ಲಿ ಹನಿಟ್ರ್ಯಾಪ್ (honeytrap Case )ವಿಚಾರದ ಬಗ್ಗೆ ಚರ್ಚೆಯಾದ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಸದನದಲ್ಲಿ ಪ್ರಸ್ತಾಪವಾದ ಬಳಿಕ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಯಾವ ರೀತಿಯ ತನಿಖೆಗೆ ಆದೇಶ ನೀಡುತ್ತದೆ ಅನ್ನೋದು ಎಲ್ಲರಿಗೂ ಕುತೂಹಲ ಕೆರಳಿಸಿದೆ.
ಇನ್ನು ತಮಗೆ ಹನಿಟ್ರ್ಯಾಪ್ ಯತ್ನ ಮಾಡಿರುವ ಬಗ್ಗೆ ಸಚಿವ ರಾಜಣ್ಣ ಪ್ರಸ್ತಾಪಿಸುತ್ತಿದ್ದಂತೆಯೇ ವಿರೋಧ ಪಕ್ಷದ ಕೆಲ ನಾಯಕರು ಯತ್ನಾಳ್, ಮುನಿರತ್ನ ಹಾಗೂ ಸುನಿಲ್ ಕುಮಾರ್ ಸಹ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಲ್ಲದೇ ಸೂಕ್ತ ತನಿಖೆ ಮಾಡಿ ಹನಿಟ್ರ್ಯಾಪ್ ಹಿಂದಿರುವವರನ್ನು ಪತ್ತೆ ಮಾಡಬೇಕೆಂದು ಆಗ್ರಹಿಸಿದರು. ಆದ್ರೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್(R Ashoka)) ಸೈಲೆಂಟ್ ಆಗಿದ್ದರಿಂದ ಸ್ವಪಕ್ಷದ ನಾಯಕರೇ ಆಕ್ರೋಶ ವ್ಯಕ್ತಪಡಿಸಿದ್ದು, ಇಬ್ಬರು ನಾಯಕರು ಪರಸ್ಪರ ಬೈದಾಡಿಕೊಂಡಿರುವ ಪ್ರಸಂಗ ನಡೆದಿದೆ. ಈ ಮೂಲಕ ನಾಯಕರಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತಾಗಿದೆ.
ಹೌದು..ಇಂದು(ಮಾರ್ಚ್ 20) ಹನಿಟ್ರ್ಯಾಪ್ ಬಗ್ಗೆ ಸದನದಲ್ಲಿ ಚರ್ಚೆ ಆಯ್ತು. ಮತ್ತೊಂದರಡೆ ವಿಪಕ್ಷ ಬಿಜೆಪಿ ಪಾಳಯದಲ್ಲಿ ಜೋರು ಗಲಾಟೆಯಾಗಿದೆ. ಸಚಿವರೇ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದರೂ ಸಹ ವಿರೋಧ ಪಕ್ಷದ ನಾಯಕ ಅಶೋಕ್ ಹೆಚ್ಚಾಗಿ ಮಾತನಾಡೇ ಮೌನಕ್ಕೆ ಶರಣಾಗಿದ್ದಕ್ಕೆ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಸದನದೊಳಗೆ ಹನಿ ಟ್ರ್ಯಾಪ್ ವಿಚಾರದಲ್ಲಿ ಅಶೋಕ್ ಮೌನಕ್ಕೆ ಶರಣಾಗಿರುವುದಕ್ಕೆ ಸಿಟ್ಟಾದ ಸುನಿಲ್ ಕುಮಾರ್ ಅಶೋಕ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.









