



ಮಧ್ಯ ಪ್ರದೇಶದಲ್ಲಿ (Viral News) ವಿಚಿತ್ರವಾದ ಘಟನೆಯೊಂದು ನಡೆದಿದ್ದು, ಸತ್ತು ಹೋಗಿದ್ದ ಮಹಿಳೆ ಬದುಕಿ ಕಣ್ಮುಂದೆ ಬಂದಿದ್ದಾಳೆ. 2023 ರಲ್ಲಿ ಕೊಲೆಯಾದಳು ಎಂದು ನಂಬಲಾದ 35 ವರ್ಷದ ಮಹಿಳೆಯೊಬ್ಬರು ಮನೆಗೆ ಮರಳಿದ್ದು, ಆಕೆಯ ಕುಟುಂಬ ಮತ್ತು ಸ್ನೇಹಿತರನ್ನು ಅಚ್ಚರಿಗೊಳಿಸಿದೆ.
ಮಹಿಳೆಯನ್ನು ಮಧ್ಯ ಪ್ರದೇಶದ ಮಂದಸೌರ್ ಜಿಲ್ಲೆಯ ಲಲಿತಾ ಬಾಯಿ ಎಂದು ಗುರುತಿಸಲಾಗಿದ್ದು, 18 ತಿಂಗಳ ಹಿಂದೆ ಆಕೆ ಮೃತ ಪಟ್ಟಿದ್ದಾಳೆ ಎಂದು ಆಕೆಯ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ವಿಚಿತ್ರವೆಂದರೆ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ನಂಬಲಾದ ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ. ಲಲಿತಾ ಬಾಯಿ ಮನೆಗೆ ಹಿಂದಿರುಗಿದ್ದು, ಪೊಲೀಸ್ ಠಾಣೆಗೆ ಹಾಜರಾಗಿ ತಾನು ಜೀವಂತವಾಗಿರುವುದನ್ನು ದೃಢಪಡಿಸಿದಳು.
ಘಟನೆಯ ಬಗ್ಗೆ ಮಾಹಿತಿ ನೀಡಿದ ಪ್ರಭಾರಿ ಅಧಿಕಾರಿ ತರುಣ ಭಾರದ್ವಾಜ್ ಲಲಿತಾ ಅವರು ಮನೆಯಿಂದ ಒಬ್ಬರೇ ಹೊರಟು ಹೋಗಿದ್ದರು ಎಂದು ಹೇಳಿದ್ದಾರೆ. ತನ್ನ ನಾಪತ್ತೆಯ ಬಗ್ಗೆ ಮಾತನಾಡಿದ ಲಲಿತಾ, ತಾನು ಶಾರುಖ್ ಅವರೊಂದಿಗೆ ಭಾನುಪಾರಾಗೆ ಹೋಗಿದ್ದೆ ಎಂದು ಬಹಿರಂಗಪಡಿಸಿದರು. ಎರಡು ದಿನಗಳ ಕಾಲ ಅಲ್ಲಿಯೇ ಇದ್ದ ನಂತರ, ಆಕೆಯನ್ನು ಶಾರುಖ್ ಎಂಬ ಇನ್ನೊಬ್ಬ ವ್ಯಕ್ತಿಗೆ 5 ಲಕ್ಷ ರೂ.ಗೆ ಮಾರಾಟ ಮಾಡಿದ್ದ, ಆಕೆ ಸುಮಾರು 18 ತಿಂಗಳ ಕಾಲ ರಾಜಸ್ಥಾನದಲ್ಲಿದ್ದಳು ಎಂಬ ವಿಚಾರ ಬಹಿರಂಗಗೊಂಡಿದೆ. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಮರಳಿದೆ ಎಂದು ಲಲಿತಾ ಹೇಳಿದ್ದಾರೆ. ನನ್ನ ಬಳಿ ಮೊಬೈಲ್ ಫೋನ್ ಇರಲಿಲ್ಲ, ಆದ್ದರಿಂದ ನನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ
2023 ರ ಕೊಲೆ ಪ್ರಕರಣ
ಸೆಪ್ಟೆಂಬರ್ 2023 ರಲ್ಲಿ ಗಾಂಧಿ ಸಾಗರ್ ಪ್ರದೇಶದಿಂದ ಲಿಲಿತಾ ಬಾಯಿ ಕಾಣೆಯಾಗಿದ್ದಳು. ಕೆಲವು ದಿನಗಳ ನಂತರ ನುಜ್ಜುಗುಜ್ಜಾದ ದೇಹವೊಂದು ದೊರಕಿದ್ದು, ಅವರ ತಂದೆ ರಮೇಶ್ ನಾನುರಾಮ್ ಬಂಚಾಡಾ ಅವರ ಪ್ರಕಾರ, ಕೈಯಲ್ಲಿ ಹಚ್ಚೆ ಮತ್ತು ಕಾಲಿಗೆ ಕಪ್ಪು ದಾರವನ್ನು ಕಟ್ಟಿದ ದೈಹಿಕ ಗುರುತುಗಳ ಆಧಾರದ ಮೇಲೆ ಕುಟುಂಬವು ವಿರೂಪಗೊಂಡ ದೇಹವನ್ನು ಗುರುತಿಸಿದೆ. ಅದು ಲಲಿತಾ ಎಂದು ಮನವರಿಕೆಯಾದ ಕುಟುಂಬವು ಅಂತಿಮ ವಿಧಿಗಳನ್ನು ನಡೆಸಿತ್ತು. ಕೊಲೆ’ಗೆ ಸಂಬಂಧಿಸಿದಂತೆ ಇಮ್ರಾನ್, ಶಾರುಖ್, ಸೋನು, ಎಜಾಜ್ ಎಂಬ ನಾಲ್ವರು ಪುರುಷರನ್ನು ಬಂಧಿಸಲಾಗಿದೆ. ವಿಚಾರಣೆ ಬಾಕಿ ಇರುವ ಜೈಲಿನಲ್ಲಿರುವ ಶಂಕಿತರು, ಮಹಿಳೆ ಮತ್ತೆ ಕಾಣಿಸಿಕೊಂಡಿರುವುದನ್ನು ಉಲ್ಲೇಖಿಸಿ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಈ ವಿಷಯದ ಬಗ್ಗೆ ಮಾಹಿತಿ ಕೇಳಿದೆ ಎಂದು ಝಬುವಾ ಪೊಲೀಸ್ ಅಧೀಕ್ಷಕ (ಎಸ್‌ಪಿ) ಪದ್ಮವಿಲೋಚನ್ ಶುಕ್ಲಾ ತಿಳಿಸಿದ್ದಾರೆ.
ಮೊದಲು ಮಹಿಳೆಯ ವೈದ್ಯಕೀಯ ಪರೀಕ್ಷೆ ಮತ್ತು ಡಿಎನ್‌ಎ ಪರೀಕ್ಷೆಯನ್ನು ನಡೆಸುತ್ತೇವೆ. ಸಾಕ್ಷಿಗಳ ಹೇಳಿಕೆಗಳನ್ನು ಹೊಸದಾಗಿ ದಾಖಲಿಸುತ್ತೇವೆ. ಸಂಪೂರ್ಣ ತನಿಖೆಯ ನಂತರವೇ, ಕೊಲೆಯಾದ ಮಹಿಳೆ ಯಾರು ಎಂದು ಹೇಳಲು ಸಾಧ್ಯ ಎಂದು ಅವರು ಹೇಳಿದ್ದಾರೆ.
