



ಸಿಲಿಕಾನ್ ಸಿಟಿಯಲ್ಲಿನ ಸರ್ಕಾರದ ಪ್ರತಿಷ್ಠಿತ ಬಿಇಎಲ್ (Bharat Electronics Limited) ನಲ್ಲಿ ಕೆಲಸ ಮಾಡುತ್ತಿದ್ದ ದೀಪ್ ರಾಜ್ ಚಂದ್ರ ಎನ್ನುವ ಆರೋಪಿಯನ್ನು ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಹಾಗೂ ಮಿಲಟರಿ ಇಂಟಲಿಜೆನ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ.
ಆತನ ವಿಚಾರಣೆ ನಡೆಸಿದ ಮಿಲಟರಿ ಇಂಟಲಿಜೆನ್ಸ್ ಎದುರು ಇದೀಗ ಸ್ಫೋಟಕ ಮಾಹಿತಿ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಬಿಇಎಲ್ನಲ್ಲಿನ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನೆ
ಬಂಧಿತ ಆರೋಪಿ ದೀಪ್ ರಾಜ್ ಚಂದ್ರ ಮೂಲತಃ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದವನು. ಬೆಂಗಳೂರಿನ ಬಿಇಎಲ್ನಲ್ಲಿ ಪಿಐಡಿಸಿ ಆಗಿ ಕೆಲಸ ಮಾಡುತ್ತಿದ್ದನು. ಬಿಇಎಲ್ನಲ್ಲಿನ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ, ಮಿಲಟರಿ ಇಂಟಲಿಜೆನ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ.
ಪಾಕಿಸ್ತಾನದ ಐಎಸ್‌ಐ ಸಂಸ್ಥೆಯ ಮಹಿಳಾ ಗೂಢಚಾರಳ ಸಂಪರ್ಕದಲ್ಲಿದ್ದ ದೀಪ್ ರಾಜ್ ಚಂದ್ರ
ದೀಪ್ ರಾಜ್ ಚಂದ್ರ ಕಳೆದ ಮೂರು ವರ್ಷಗಳಿಂದ ಪಾಕಿಸ್ತಾನದ ಐಎಸ್‌ಐ ಸಂಸ್ಥೆಯ ಮಹಿಳಾ ಗೂಢಚಾರಳ ಸಂಪರ್ಕದಲ್ಲಿದ್ದ ಎಂದು ಮೂಲಗಳು ಹೇಳಿವೆ. ಈ ಅವಧಿಯಲ್ಲಿ ಆರೋಪಿಯ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾವಣೆ ಆಗಿರುವ ಮಾಹಿತಿ ಲಭ್ಯವಾಗಿದೆ.
ಬಿಇಎಲ್ ಕ್ಯಾಂಪಸ್‌ನಲ್ಲಿ ವಾಸ
ಪಾಕಿಸ್ತಾನಿ ಗೂಢಚಾರನಾಗಿ ಕೆಲಸ ಮಾಡುತ್ತಿದ್ದ ದೀಪ್ ರಾಜ್ ಚಂದ್ರ ಬಿಇಎಲ್ ಕ್ಯಾಂಪಸ್‌ನಲ್ಲಿ ವಾಸವಾಗಿದ್ದನು. ಈತ ಹಲವು ಬಾರಿ ಮಿಲಿಟರಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ ಆರೋಪ ಎದುರಿಸುತ್ತಿದ್ದಾನೆ.
ಮೊಬೈಲ್, ಲ್ಯಾಪ್‌ಟಾಪ್ ಮಿಲಿಟರಿ ಗುಪ್ತಚರ ಇಲಾಖೆ ವಶಕ್ಕೆ
ಪ್ರಸ್ತುತ ಆರೋಪಿಯ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಮಿಲಿಟರಿ ಗುಪ್ತಚರ ಇಲಾಖೆ ವಶಪಡಿಸಿಕೊಂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ. ಇಂದು ಸಂಜೆಯೊಳಗೆ ಆರೋಪಿಯನ್ನು ದೆಹಲಿಗೆ ಕರೆದೊಯ್ಯುವ ಸಾಧ್ಯತೆ ಇದೆ.