
ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ವೆಂಕಟ ಸಾಯಿ ಸೂರ್ಯ ಎಂಬ ಪುರೋಹಿತನಿಗೆ ಹೈದರಾಬಾದ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ ಸಾಕ್ಷ್ಯಗಳನ್ನು ತಿರುಚಿದ ಆರೋಪದ ಮೇಲೆ ನ್ಯಾಯಾಲಯವು ಹೆಚ್ಚುವರಿಯಾಗಿ ಏಳು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಿದೆ.
ತನಿಖಾಧಿಕಾರಿಗಳ ಪ್ರಕಾರ, ಈಗಾಗಲೇ ವಿವಾಹಿತನಾಗಿದ್ದ ಸಾಯಿ ಕೃಷ್ಣ, ಅಪ್ಸರ ಎಂಬ ಮಹಿಳೆಯೊಂದಿಗೆ ಮದುವೆಯ ಭರವಸೆ ನೀಡಿ ಸಂಬಂಧ ಬೆಳೆಸಿಕೊಂಡಿದ್ದ.
ಇಬ್ಬರೂ ಕೆಲಕಾಲ ವಿವಾಹೇತರ ಸಂಬಂಧದಲ್ಲಿ ತೊಡಗಿದ್ದರು. ಆದರೆ, ಅಪ್ಸರ ಮದುವೆಯಾಗುವಂತೆ ಒತ್ತಾಯಿಸಿದಾಗ, ಸಾಯಿ ಕೃಷ್ಣ ಅವಳನ್ನು ಕೊಲೆ ಮಾಡಲು ಯೋಜನೆ ರೂಪಿಸಿದ. 2023ರ ಜೂನ್ 3 ರಂದು, ಅಪ್ಸರಳನ್ನು ಕೊಯಿಮತ್ತೂರು ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಮನವೊಲಿಸಿದ್ದ. ಆ ರಾತ್ರಿ ಅವರು ರಲ್ಲಗೂಡದಲ್ಲಿ ಊಟ ಮಾಡಿ, ಸುಲ್ತಾನ್‌ಪಲ್ಲಿ ಗೋಶಾಲೆಗೆ ಭೇಟಿ ನೀಡಿದರು. ಆದರೆ, ಜೂನ್ 4ರ ರಾತ್ರಿ ಅಪ್ಸರಳನ್ನು ಶಂಶಾಬಾದ್ ಬಳಿಯ ನರ್ಖೋಡ ಗ್ರಾಮದ ಒಂಟಿ ಪ್ರದೇಶಕ್ಕೆ ಕರೆದೊಯ್ದು, ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ.
ಶವವನ್ನು ಸರೂರ್ ನಗರಕ್ಕೆ ಸಾಗಿಸಿ, ಎಸ್‌ಆರ್‌ಒ ಕಚೇರಿ ಬಳಿಯ ಒಂದು ಒಳಚರಂಡಿ ಮ್ಯಾನ್‌ಹೋಲ್‌ಗೆ ತುಂಬಿ, ಸೀಮೆಂಟ್‌ನಿಂದ ಮುಚ್ಚಿ, ಗಮನ ಬೇರೆಡೆಗೆ ಸೆಳೆಯಲು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದ.






