

ರಾಜ್ಯದಲ್ಲಿ ಹಾಲು, ವಿದ್ಯುತ್ ಸಹಿತ ಬೆಲೆ ಏರಿಕೆ ಮಾಡಿರುವುದು ಹಾಗೂ ಬಜೆಟ್‌ನಲ್ಲಿ ಮುಸ್ಲಿಂ ಓಲೈಕೆಯ ಸರಕಾರದ ಕ್ರಮವನ್ನು ಖಂಡಿಸಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಮಂಗಳೂರಿನಲ್ಲಿ ಎ.9ರಂದು ನಡೆಯಲಿದೆ
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಹಿತ ಹಿರಿಯ ನಾಯಕರು ಭಾಗವಹಿಸುವ ನಿರೀಕ್ಷೆ ಇದ್ದು, ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಈ ಬಾರಿಯ ಯುಗಾದಿ ರಾಜ್ಯದ ಜನರಿಗೆ ಖುಷಿ ತಂದಿಲ್ಲ. ಎಲ್ಲರೂ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಒಂದೆಡೆ ದಿನನಿತ್ಯ ಬಳಕೆ ವಸ್ತುಗಳ ದರ ಏರಿದ್ದರೆ ಇನ್ನೊಂದೆಡೆ ವಿದ್ಯುತ್ ದರ, ಹಾಲು ಮೊಸರಿನ ದರ ಏರಿದೆ. ನೋಂದಣಿಯ ಶುಲ್ಕ, ವೈದ್ಯಕೀಯ ಪ್ರಮಾಣ ಪತ್ರ ಶುಲ್ಕ, ಮರಣಪ್ರಮಾಣ ಪತ್ರ ಶುಲ್ಕ ಹೀಗೆ ಸಾಲು ಸಾಲು ದರ ಏರಿಕೆಯಾಗಿದ್ದರಿಂದ ಜನತೆ ಬಸವಳಿದಿದೆ ಎಂದರು.
ಎಲ್ಲವೂ ಉಚಿತ ಎಂದು ಮರುಳು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ತನ್ನ ಗ್ಯಾರಂಟಿಗಳನ್ನೇ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಜನರಿಗೆ ಯಾವುದೂ ಉಚಿತವಿಲ್ಲ. ಈ ಬಗ್ಗೆ ಚರ್ಚೆಗೆ ಹೊರಟರೆ ಕಾಂಗ್ರೆಸ್ ವಿಧಾನಸೌಧದಿಂದ ಪಲಾಯನ ಮಾಡುತ್ತದೆ. ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡುವ ಮೂಲಕ ಅನ್ಯಾಯವೆಸಗಿದೆ ಎಂದು ಟೀಕಿಸಿದರು.
ಸ್ಪೀಕರ್ ಒಂದೇ ಪಕ್ಷಕ್ಕೆ ಸೇರಿದವರಾ?
ಕ್ರಿಯಾಶೀಲ ಶಾಸಕರನ್ನು ತಡೆಯಲು ಕಾಂಗ್ರೆಸ್ ಪಕ್ಷದವರಂತೆಯೇ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ವರ್ತಿಸಿ ಆರು ತಿಂಗಳಿಗೆ ಅಮಾನತು ಮಾಡಿದ್ದಾರೆ. ಅಲ್ಲದೆ ಉದ್ಧಟತನದ ಹೇಳಿಕೆ ಕೊಟ್ಟು ಒಂದು ವರ್ಷ ಬೇಕಾದರೂ ಅಮಾನತು ಮಾಡಬೇಕು ಎಂದಿದ್ದಾರೆ. ಇದನ್ನು ಜನ ಗಮನಿಸುತ್ತಿದ್ದು, ತಕ್ಕ ಬುದ್ಧಿ ಕಲಿಸುತ್ತಾರೆ ಎಂದರಲ್ಲದೇ, ಖಾದರ್ ಅವರಿಗೆ ಸ್ಪೀಕರ್ ಆಗಲು ಬಿಜೆಪಿ ಕೂಡಾ ಬೆಂಬಲಿಸಿತ್ತು. ಅವಿರೋಧವಾಗಿ ಅವರು ಆಯ್ಕೆಯಾಗಿದ್ದರು
ಆಗ ಜಿಲ್ಲೆಯ ಜನರಿಗೆ ಅವರಿಂದ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಅದೆಲ್ಲವನ್ನೂ ಹುಸಿಗೊಳಿಸಿದ್ದಾರೆ ಎಂದರು.
ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಅರ್ವಾರ್, ಪ್ರೇಮಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
