
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಗುಜರಾತ್ ಬಳಿಕ ಕರ್ನಾಟಕವೇ ಅಭಿವೃದ್ಧಿಯಲ್ಲಿ ಅಗ್ರಪಂಕ್ತಿಯಲ್ಲಿತ್ತು. ಆದರೆ ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 ಆಗಿದೆ. ಇದನ್ನು ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಯರೆಡ್ಡಿ ಅವರೇ ಹೇಳಿದ್ದಾರೆ.
ಇದುವೇ ಕಾಂಗ್ರೆಸ್‌ನ ನಿಜವಾದ ಆಡಳಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಕಾಂಗ್ರೆಸ್ ಸರಕಾರವು ಬೆಲೆ ಏರಿಕೆ ಹಾಗೂ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಕ್ಲಾಕ್‌ಟವರ್‌ವರೆಗೆ ಬುಧವಾರ ಆಯೋಜಿಸಲಾದ ಜನಾಕ್ರೋಶ ಯಾತ್ರೆಯ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಸಿಎಂ ಆದ ಮೇಲೆ ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳ ಸಹಿತ 50ಕ್ಕೂ ಅಧಿಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಜಮ್ಮು ಅಭಿವೃದ್ಧಿಗೆ ಅನುದಾನ ನೀಡಿದ ಪ್ರಧಾನಿ ಮೋದಿ ಅವರನ್ನು ಜಮ್ಮು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಭಿನಂದಿಸಿದ್ದಾರೆ. ಆದರೆ ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರ ಕೇಂದ್ರದ ವಿರುದ್ಧ ಸಂಘರ್ಷ ಹಾದಿ ತುಳಿದಿದೆ ಎಂದ ಅವರು, ತಮ್ಮ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರೇ ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದರು.
ರಾಜ್ಯದ ಮುಖ್ಯಮಂತ್ರಿ ಆದ ಮೇಲೆ ಸಿದ್ದರಾಮಯ್ಯ ಅವರು ಎಷ್ಟು ಬಾರಿ ಮಂಗಳೂರಿಗೆ ಭೇಟಿ ಕೊಟ್ಟಿದ್ದೀರಿ, ಎಷ್ಟು ಅನುದಾನ ಕೊಟ್ಟಿದ್ದೀರಿ, ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದಲ್ಲಿ ಇಲ್ಲವೇ ಎಂದು ವಿಜಯೇಂದ್ರ ಪ್ರಶ್ನಿಸಿದರು.
ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ದಪ್ಪ ಚರ್ಮದ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾನ ಮರ್ಯಾದೆ ಕಳೆದುಕೊಂಡಿದೆ. ಸೋತ ಅಭ್ಯರ್ಥಿಗಳು ಕೂಡ ತಮ್ಮ ಲೆಟರ್‌ಹೆಡ್ ಬಳಸಿ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಜನವಿರೋಧಿ ನೀತಿ ವಿರುದ್ಧ ಗ್ರಾಮ, ಬೂತ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರು ಜನ ಜಾಗೃತಿ ಮೂಡಿಸಬೇಕಿದೆ ಎಂದರು.
ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಮಾತನಾಡಿ, ಅಲ್ಲಾವುದ್ದೀನ್ ಖೀಲ್ಜಿ, ಮೊಹಮ್ಮದ್ ಬಿನ್ ತುಘಲಕ್‌ಗಿಂತ ಭ್ರಷ್ಟ ಸರಕಾರ ರಾಜ್ಯದಲ್ಲಿದೆ. ಬೆಲೆ ಏರಿಕೆ, ಜನ ವಿರೋಧಿ ನೀತಿಯಿಂದ ಜನರ ಮೇಲೆ ಸವಾರಿ ನಡೆಸುತ್ತಿದ್ದಾರೆ. ಬಿಜೆಪಿಯ ಜನಾಕ್ರೋಶ ಪಾದಯಾತ್ರೆಯನ್ನು ಟೀಕಿಸುವ ಸಿದ್ದರಾಮಯ್ಯ ಅವರೇ, ನೀವು ಈ ಹಿಂದೆ ಯಾಕೆ ಬಳ್ಳಾರಿ ಪಾದಯಾತ್ರೆ ನಡೆಸಿದ್ದೀರಿ ಎಂದು ಪ್ರಶ್ನಿಸಿದರು.
ಶಾಸಕ ಸುನಿಲ್ ಕುಮಾರ್, ಕರಾವಳಿ ಯಲ್ಲಿ ಯಾವುದೇ ಅಭಿವೃದ್ಧಿಯನ್ನು ಕಾಂಗ್ರೆಸ್ ಮಾಡಿಲ್ಲ.ಹಿಂದೂ ವಿರೋಧಿ ನೀತಿಯೇ ಅದರ ಆಡಳಿತ. ಮುಂದಿನ ಮೂರು ವರ್ಷದ ಬಳಿಕ ಮತ್ತೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ವೇದವ್ಯಾಸ್ ಕಾಮತ್, ಡಾ| ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ವಿ.ಪರಿಷತ್ ಸದಸ್ಯ ಕಿಶೋರ್ ಕುಮಾರ್, ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್, ಎಸ್. ಅಂಗಾರ, ಸಂಜೀವ ಮಠಂದೂರು, ಪ್ರೀತಂ ಗೌಡ, ಉದಯ ಕುಮಾರ್, ಸಿಮೆಂಟ್ ಮಂಜು, ರವಿ ಕುಮಾರ್, ಮುನಿಸ್ವಾಮಿ ಉಪಸ್ಥಿತರಿದ್ದರು. ತಿಲಕ್‌ರಾಜ್ ಕೃಷ್ಣಾಪುರ ನಿರೂಪಿಸಿದರು.









