
ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯ ಚೆನಾಬ್ ನದಿಯ ಬಳಿಯ ಧರಮ್‌ಕುಂಡ್ ಗ್ರಾಮದಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹವು ಅಪಾರ ಹಾನಿಯನ್ನುಂಟು ಮಾಡಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ಕಾಣೆಯಾಗಿದ್ದಾರೆ.
ಭೂಕುಸಿತಗಳು, ಆಲಿಕಲ್ಲು ಮಳೆ ಮತ್ತು ಬಿರುಗಾಳಿಯೊಂದಿಗೆ ಉಂಟಾದ ನೈಸರ್ಗಿಕ ವಿಕೋಪವು ಆಸ್ತಿ ಮತ್ತು ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟು ಮಾಡಿದೆ. ಈಗಾಗಲೇ ಡಜನ್‌ಗಟ್ಟಲೆ ಕುಟುಂಬಗಳನ್ನು ಸ್ಥಳಾಂತರಿಸಲಾದೆ. ಅಲ್ಲದೇ ಅನೇಕ ಸ್ಥಳಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, ನಿರಂತರ ಮಳೆಯಿಂದಾಗಿ ಹತ್ತಿರದ ನಾಲಾದಲ್ಲಿ ಏಕಾಏಕಿ ನೀರಿನ ಮಟ್ಟ ಏರಿತು. ಇದು ಚೆನಾಬ್ ಸೇತುವೆಯ ಬಳಿಯ ಧರ್ಮಕುಂಡ್ ಗ್ರಾಮವನ್ನು ಆವರಿಸಿದ ದಿಢೀರ್ ಪ್ರವಾಹವಾಗಿ ಮಾರ್ಪಟ್ಟಿತು. ಪರಿಣಾಮ 10 ಮನೆಗಳು ಮುಳುಗಿದ್ದು, 25 ರಿಂದ 30 ಮನೆಗಳು ಭಾಗಶಃ ಹಾನಿಗೊಳಗಾದವು.
ವಿನಾಶದ ಹೊರತಾಗಿಯೂ, ಧರಮಕುಂಡ್ ಪೊಲೀಸರು ಮತ್ತು ಜಿಲ್ಲಾಡಳಿತದ ತ್ವರಿತ ಪ್ರತಿಕ್ರಿಯೆಯಿಂದಾಗಿ ಪ್ರವಾಹಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 90 ರಿಂದ 100 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಭಾರೀ ಮಳೆಯಿಂದಾಗಿ ಬಾಗ್ನಾ ಗ್ರಾಮದಲ್ಲಿ ಮನೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ರಾಂಬನ್ ಕುಲ್ಬೀರ್ ಸಿಂಗ್ ದೃಢಪಡಿಸಿದ್ದಾರೆ.
ಮೃತರನ್ನು ಬಾಗ್ನಾ ಪಂಚಾಯತ್ ನಿವಾಸಿಗಳಾದ ಮೊಹಮ್ಮದ್ ಅಕಿಬ್ (14), ಮೊಹಮ್ಮದ್ ಸಕೀಬ್ (9) ಮತ್ತು ಮೋಹನ್ ಸಿಂಗ್ (75) ಎಂದು ಗುರುತಿಸಲಾಗಿದೆ. ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಜಿಲ್ಲೆಯಾದ್ಯಂತ ಎರಡು ಹೋಟೆಲ್‌ಗಳು, ಹಲವಾರು ಅಂಗಡಿಗಳು ಮತ್ತು ಹಲವಾರು ವಸತಿ ರಚನೆಗಳು ಹಾನಿಗೊಳಗಾಗಿವೆ. ಮನೆಗಳು, ಕುಸಿದ ರಚನೆಗಳು ಮತ್ತು ಅವಶೇಷಗಳ ಅಡಿಯಲ್ಲಿ ಹೂತುಹೋಗಿರುವ ವಾಹನಗಳ ಮೂಲಕ ನೀರು ನುಗ್ಗುತ್ತಿರುವ ವೀಡಿಯೊಗಳು ವೈರಲ್ ಆಗುತ್ತಿವೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ರಂಬನ್‌ನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ಹಠಾತ್ ಪ್ರವಾಹದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದ ಅವರು, ತ್ವರಿತ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯದಲ್ಲಿದೆ ಎಂದು ಭರವಸೆ ನೀಡಿದರು.






