ಮಂಗಳೂರು, ಎ.26 ಭಾರೀ ಕುತೂಹಲ ಮೂಡಿಸಿದ್ದ ದಕ್ಷಿಣ ಕನ್ನಡ ಹಾಲು ಒಕ್ಕೂಟ (ಕೆಎಂಎಫ್) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಸ್ ಸಿ ಡಿಸಿಸಿ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ನೇತೃತ್ವದ ಕಾಂಗ್ರೆಸ್‌ ಮುಖಂಡ ಬೆಳಪು ದೇವಿಪ್ರಸಾದ್‌ ಶೆಟ್ಟಿ ಬಣಕ್ಕೆ ಭರ್ಜರಿ ಜಯ ಸಿಕ್ಕಿದೆ. ಉಡುಪಿ ಜಿಲ್ಲೆಯಲ್ಲಿ ಬೆಳಪು ನೇತೃತ್ವದ ಹೈನುಗಾರರ ಬಳಗದ ಅಭ್ಯರ್ಥಿಗಳು ಎಂಟಕ್ಕೆ ಎಂಟು ಸ್ಥಾನವನ್ನೂ ಗೆದ್ದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಮಂದಿ ಸಹಕಾರ ಭಾರತಿ ಮತ್ತು ಇಬ್ಬರು ಹೈನುಗಾರರ ಬಳಗದವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಂದು ಮಹತ್ವದ ಸಹಕಾರ ಕ್ಷೇತ್ರವನ್ನು ರಾಜೇಂದ್ರ ಕುಮಾರ್ ಬಣ ತನ್ನ ಕೈವಶ ಮಾಡಿಕೊಂಡು ಬಿಜೆಪಿಗೆ ಹೀನಾಯ ಸೋಲುಣಿಸಿದೆ.

ಉಡುಪಿ ಜಿಲ್ಲೆಯಲ್ಲಿ ಬೆಳಪು ದೇವಿಪ್ರಸಾದ್‌ ಶೆಟ್ಟಿ(165), ಉದಯ ಕೋಟ್ಯಾನ್(172 ಮತ), ಎಸ್.ಪ್ರಕಾಶ್ಚಂದ್ರ ಮೇಕೋಡು (185), ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ(-145), ಕೊಡವೂರು ರವಿರಾಜ ಹೆಗ್ಡೆ (220), ಕೆ.ಶಿವಮೂರ್ತಿ ಉಪಾಧ್ಯ(124), ಮುಡಾರು ಸುಧಾಕರ ಶೆಟ್ಟಿ (162), ಹದ್ದೂರು ಮಮತಾ ಶೆಟ್ಟಿ(190) ಗೆಲುವು ಪಡೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸಹಕಾರ ಭಾರತಿಯ ಯಾವ ಅಭ್ಯರ್ಥಿಯೂ ಗೆಲುವು ಪಡೆದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಮಂದಿ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಕೆ.ಚಂದ್ರಶೇಖರ ರಾವ್ (169 ಮತ), ಎಸ್‌.ಬಿ ಜಯರಾಮ ರೈ-190, ಹೆಚ್.ಪ್ರಭಾಕರ್ 157, ಭರತ್ ಎನ್ 173, ಸುಧಾಕರ ರೈ 97 ಮತ್ತು ಮಹಿಳಾ ಕೋಟಾದಿಂದ ಸ್ಪರ್ಧಿಸಿದ್ದ ಸವಿತಾ ಶೆಟ್ಟಿ(235 ಮತ) ಗೆಲುವು ಕಂಡಿದ್ದಾರೆ. ಕಾಂಗ್ರೆಸಿನ ಹೈನುಗಾರರ ಬಳಗದಿಂದ ಸ್ಪರ್ಧಿಸಿದ್ದ ಸುಚರಿತ ಶೆಟ್ಟಿ 99 ಮತ್ತು ನಂದರಾಮ ರೈ 97 ಪ್ರಯಾಸದಲ್ಲಿ ಗೆಲುವು ಕಂಡಿದ್ದಾರೆ. ಎರಡು ಜಿಲ್ಲೆಯ ವ್ಯಾಪ್ತಿಯಿರುವ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟಕ್ಕೆ 16 ಸದಸ್ಯರಿದ್ದು, 106 ಅಂತರದಲ್ಲಿ ಹೈನುಗಾರರ ಬಳಗ ಗೆಲುವು ದಾಖಲಿಸಿದೆ. ಆಮೂಲಕ ಸಹಕಾರಿ ಧುರೀಣನ ನೇತೃತ್ವದ ಬಣವು ಅಧಿಕೃತವಾಗಿ ಕೆಎಂಎಫ್ ಅಧಿಕಾರ ಹಿಡಿಯಲು ಎಂಟ್ರಿಯಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!