
ಪುತ್ತೂರು; ಬಡ ಜನತೆಯ ೪೦ ವರ್ಷದ ಬೇಡಿಕೆಯಾದ ರಿಕ್ಷಾ ತಂಗುದಾಣವೊAದನ್ನು ನಿರ್ಮಿಸಲು ಹೋದಾಗ ನಗರಸಭೆಯೂ ಸೇರಿದಂತೆ ಸ್ಥಳೀಯ ವ್ಯಕ್ತಿಯೊಬ್ಬರ ಆಕ್ಷೇಪದಿಂದ ಉಂಟಾದ ಸಮಸ್ಯೆ, ನಿಲ್ದಾಣವನ್ನು ಅರ್ಧದಲ್ಲಿಯೇ ನಿಲ್ಲಿಸಬೇಕಾದ ಅನಿವಾರ್ಯತೆ, ಸ್ಥಳೀಯಾಡಳಿತ ನೀಡದ ಬೆಂಬಲಕ್ಕೆ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಮಂಗಳವಾರ ಪುತ್ತೂರು ನಗರಸಭೆಯ ಅಧ್ಯಕ್ಷೆ ಲೀಲಾವತಿ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯೆ ಶಶಿಕಲಾ ಅವರು ಆಕ್ರೋಶ ವ್ಯಕ್ತಪಡಿಸಿದರು. ಕೂರ್ನಡ್ಕ ಎಂಬಲ್ಲಿ ಕಳೆದ ೪೦ ವರ್ಷಗಳಿಂದ ರಿಕ್ಷಾ ತಂಗುದಾಣದ ಬೇಡಿಕೆ ಇತ್ತು. ಇದಕ್ಕೆ ಸಂಬAಧಿಸಿ ಸ್ಥಳೀಯ ದಾನಿಯೊಬ್ಬರ ಮೂಲಕ ರಿಕ್ಷಾ ನಿಲ್ದಾಣದ ಕೆಲಸ ಪ್ರಾರಂಭ ಮಾಡಲಾಗಿತ್ತು. ಆದರೆ ಶೇ೭೦ ರಷ್ಟು ಕೆಲಸ ಮುಗಿದಾಗ ನಗರಸಭೆಯ ಪೌರಾಯುಕ್ತರು ಇದಕ್ಕೆ ತಡೆ ಆದೇಶ ನೀಡಿದ್ದರು. ಕಾರಣ ಸ್ಥಳೀಯ ವ್ಯಕ್ತಿಯೊಬ್ಬರ ವಾಣಿಜ್ಯ ಸಂಕೀರ್ಣಕ್ಕೆ ಅಡ್ಡಿಯಾಗುತ್ತದೆ. ಜತೆಗೆ ಈ ನಿಲ್ದಾಣ ನಿರ್ಮಾಣ ಚರಂಡಿಯನ್ನೂ ಸೇರಿಸಿ ಮಾಡಲಾಗುತ್ತಿದೆ. ಆದರೆ ನಗರದ ಪ್ರತಿಯೊಂದು ಕಡೆಯೂ ನಿಯಮವನ್ನು ಅನುಸರಣೆ ಮಾಡಲಾಗಿದೆಯಾ.. ಬನ್ನೂರಿನ ಮೆಸ್ಕಾಂ ಇಲಾಖೆಯ ಮುಂಭಾಗದ ಚರಂಡಿಯಲ್ಲಿಯೇ ರಿಕ್ಷಾ ತಂಗುದಾಣವನ್ನು ಕಟ್ಟಲಾಗಿದೆ. ಇದಕ್ಕೆ ಯಾಕೆ ಆಕ್ಷೇಪ ಮಾಡಿಲ್ಲ. ಪಾಪ ಬಿಸಿಲಲ್ಲಿ ತಮ್ಮ ಒಂದು ಹೊತ್ತಿನ ತುತ್ತಿಗಾಗಿ ದುಡಿಯುವ ರಿಕ್ಷಾ ಚಾಲಕರಿಗೆ ಸೂರು ಕಲ್ಪಿಸುವ ಯೋಜನೆಗೆ ಉದ್ದೇಶ ಪೂರ್ವಕವಾಗಿ ತಡೆ ಒಡ್ಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ನಡೆಯುವ ಎಲ್ಲಾ ರಿಕ್ಷಾ ತಂಗುದಾಣಗಳಿಗೆ ಎನ್‌ಒಸಿ ಪಡೆಯಲಾಗಿದೆಯಾ. ಬಡ ಜನತೆಗೆ ಅನ್ಯಾಯ ಮಾಡುವ ಈ ರೀತಿಯ ರಾಜಕೀಯ ಮಾಡುವುದು ಸರಿಯಾ ಎಂದವರು ಪ್ರಶ್ನಿಸಿದರು. ಈ ಸಂದರ್ಭ ಇನ್ನೋರ್ವ ಸದಸ್ಯ ಇಸುಬು ಅವರು ರಸ್ತೆ ಬದಿಯಲ್ಲಿ ಚರಂಡಿಯಲ್ಲಿ ಈ ತಂಗುದಾಣ ಮಾಡಲಾಗುತ್ತಿದೆ. ವಾಣಿಜ್ಯ ಸಂಕೀರ್ಣಕ್ಕೆ ಅಡ್ಡವಾಗಿ ನಿಲ್ದಾಣ ಮಾಡಲು ಹೊರಟರೆ ಅವರು ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು. ಇದರಿಂದ ಮತ್ತಷ್ಟು ಕೆರಳಿದ ಶಶಿಕಲಾ ಅವರು ಈ ವಾಣಿಜ್ಯ ಸಂಕೀರ್ಣ ಮಾಡುವವರು ಅವರ ಮತದಾರರು ಹಾಗಾಗಿ ಅವರು ಪರವಾಗಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಶಶಿಕಲಾ ಅವರು ಎತ್ತಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾರದ ಪೌರಾಯುಕ್ತ ಮಧು ಎಸ್ ಮನೋಹರ್ ನಿಲ್ದಾಣ ನಿರ್ಮಾಣಕ್ಕೆ ನಗರಸಭೆಯ ಅಡ್ಡಿಯಿಲ್ಲ. ಆದರೆ ಆಕ್ಷೇಪ ಬಂದ ಹಿನ್ನಲೆಯಲ್ಲಿ ತಡೆ ಮಾಡಲಾಗಿದೆ ಎಂದು ಸಮಜಾಯಿಸಿ ಕೊಟ್ಟರು. ಕೊನೆಗೂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪೌರಾಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಎಂದು ಸದಸ್ಯರ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ಚರ್ಚೆ ಅಂತ್ಯವಾಯಿತು.
ನೆಲ್ಲಿಕಟ್ಟೆಯನ್ನು ಮಳೆಗಾಲದಲ್ಲಿ ಮುಳುಗದಂತೆ ರಕ್ಷಣೆ ಮಾಡಬೇಕಾದರೆ ಇಲ್ಲಿನ ಒಳಚರಂಡಿ ವ್ಯವಸ್ಥೆ ಸಮರ್ಪಕಗೊಳಿಸಬೇಕು. ಇದಕ್ಕೆ ಅನುದಾನ ನೀಡುವಂತೆ ಸದಸ್ಯ ರಮೇಶ್ ರೈ ಆಗ್ರಹಿಸಿದರು. ಮಳೆಗಾಲದ ಮೊದಲು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯ ನಡೆಸಲಾಗುತ್ತಿದೆ. ಆದರೆ ಇದು ಕಳಪೆಯಾಗುತ್ತಿದೆ. ಹಾಕಿದ ತೇಪೆ ಎದ್ದುಹೋಗುತ್ತಿದೆ. ಹೊಂಡಗಳಿಗೆ ಸಾರ್ವಜನಿಕರು ಕಲ್ಲುಮಣ್ಣು ಹಾಕಿರುತ್ತಾರೆ. ಈ ತೇಪೆ ಹಾಕುವ ಗುತ್ತಿಗೆದಾರರು ಇದನ್ನು ಹಾಗೆಯೇ ಬಿಡುತ್ತಿದ್ದಾರೆ ಎಂದು ಗೌರಿ ಬನ್ನೂರು ಹೇಳಿದರು. ಹೊಸ ವಿದ್ಯುತ್ ಕಂಬಗಳನ್ನು ರಸ್ತೆಯ ಬದಿಯಲ್ಲಿಯೇ ಹಾಕಲಾಗುತ್ತಿದೆ. ಇದು ಮುಂದೆ ಸಮಸ್ಯೆಗೆ ಕಾರಣವಾಗಲಿದೆ. ಇದನ್ನು ಮೆಸ್ಕಾಂ ಗಮನಕ್ಕೆ ತರಬೇಕು ಎಂದು ಸದಸ್ಯ ಜೀವಂಧರ್ ಜೈನ್ ಹೇಳಿದರು.
ತ್ಯಾಜ್ಯ ಎಸೆದವರಿಗೆ ದಂಡ- ಮಾರ್ಷಲ್‌ಗಳ ನೇಮಕ
ರಸ್ತೆ ಬದಿಯಲ್ಲಿ ಕಸ ಹಾಗೂ ತ್ಯಾಜ್ಯ ಎಸೆಯುತ್ತಿರುವ ಘಟನೆಗಳ ನಿರಂತರವಾಗಿ ನಡೆಯುತ್ತಿದೆ. ಸಿಸಿ ಕ್ಯಾಮರಾ ಅಳವಡಿಕೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಇಂತವರಿಗೆ ದಂಡ ವಿಧಿಸಲು ತೀರ್ಮಾನಿಸಲಾಯಿತು. ತ್ಯಾಜ್ಯ ನಿರ್ವಹಣೆಗೆ ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ೪ ಮಂದಿ ಮಾರ್ಷಲ್ ಗಳ ನೇಮಕ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಿವೃತ್ತ ಯೋಧರು ಹಾಗೂ ನಿವೃತ್ತ ಆರೋಗ್ಯ ಅಧಿಕಾರಿಗಳಿಗೆ ಆಧ್ಯತೆ ನೀಡುವುದಾಗಿ ಸಭೆಗೆ ತಿಳಿಸಲಾಯಿತು.
ತ್ಯಾಜ್ಯ ನಿರ್ವಹಣೆ ಕುರಿತು ಸಮಗ್ರ ಅಧ್ಯಯನ ನಡೆಸುವ ದೃಷ್ಟಿಯಿಂದ ಉಡುಪಿ ಮತ್ತು ಗೋವಾಕ್ಕೆ ೩ ದಿನಗಳ ಅಧ್ಯಯನ ಪ್ರವಾಸವನ್ನು ನಗರಸಭೆಯ ಸದಸ್ಯರು ಹಾಗೂ ಅಧಿಕಾರಿಗಳಿಗೆ ನಡೆಸಲಾಗುವುದು. ಇದರಲ್ಲಿ ೩೭ ಮಂದಿ ಭಾಗವಹಿಸಲು ಅವಕಾಶ ಇದೆ. ಮೇ ತಿಂಗಳ ಮೊದಲ ವಾರದಲ್ಲಿ ಪ್ರವಾಸ ನಿಗಧಿ ಮಾಡಲಾಗಿದೆ ಎಂದು ಪೌರಾಯುಕ್ತರು ಸಭೆಗೆ ಮಾಹಿತಿ ನೀಡಿದರು.
ಅಡಿಟ್ ಬೇಡವೆಂದ ಸದಸ್ಯ..!
೨೦೧೮ರಿಂಎ ೨೦೨೩ರ ವರೆಗಿನ ೫ ವರ್ಷಗಳ ಲೆಕ್ಕ ಪರಿಶೋಧನೆಯ ಶುಲ್ಕ ರೂ.೧೭,೧೪೨೮೭ವನ್ನು ಸರ್ಕಾರದ ಲೆಕ್ಕ ಶಿರ್ಷಿಕೆಗೆ ಪಾವತಿಸುವ ಹಿನ್ನಲೆಯಲ್ಲಿ ಅನುಮೋದನೆಗಾಗಿ ಸಭೆಗೆ ಮಂಡಿಸಲಾಯಿತು. ಇಷ್ಟೊಂದು ಹಣವನ್ನು ಅಡಿಟ್ ಶುಲ್ಕ ನೀಡಬೇಕಾಗಿದೆ ಎಂಬುವುದನ್ನು ಕೇಳಿದ ಸದಸ್ಯ ಭಾಮಿ ಅಶೋಕ್ ಶೆಣೈ ಅವರು ಈ ಅಡಿಟ್ ಮಾಡಿಸುವುದೇ ಬೇಡ. ಆ ದುಡ್ಡನ್ನು ಕಾಮಗಾರಿಗೆ ಬಳಸಿಕೊಳ್ಳುವಾ ಎಂದರು. ತಕ್ಷಣ ಹಾಗೆ ಮಾಡಿದರೆ ನಗರಸಭೆಯೇ ಉಲ್ಟಾ ಪಲ್ಟಾ ಆಗುತ್ತದೆ ಎಂದು ಸ್ಥಾಯಿಸಮಿತಿ ಅಧ್ಯಕ್ಷ ಸುಂದರಪೂಜಾರಿ ಬಡಾವು ಚಟಾಕಿ ಹಾರಿಸಿದರು.ವೇದಿಕೆಯಲ್ಲಿ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಹಾಗೂ ಪೌರಾಯುಕ್ತ ಮಧು ಎಸ್ ಮನೋಹರ್ ಉಪಸ್ಥಿತರಿದ್ದರು.






