
ದೇ ಶದಲ್ಲಿ ಭದ್ರತೆಗೆ ಖರ್ಚು ಮಾಡೋರ ಸಂಖ್ಯೆ ಒಬ್ಬರಾ ಇಬ್ಬರಾ? ಕೆಲವರಂತೂ ಲಕ್ಷ ಲಕ್ಷ ಖರ್ಚು ಮಾಡಿ ಬುಲೆಟ್ಪ್ರೂಫ್ SUVಗಳು, ಶಸ್ತ್ರಸಜ್ಜಿತ ಸೆಕ್ಯುರಿಟಿಗಾರ್ಡ್ಗಳನ್ನು ನೇಮಿಸುತ್ತಾರೆ. ಆದರೆ, ಇಲ್ಲೊಬ್ಬ ಚಿಕ್ಕ ಹುಡುಗಿ ‘Z+ ಭದ್ರತೆ’ ಎಂಬ ಪದಕ್ಕೆ ಹೊಸ ಅರ್ಥ ಕೊಟ್ಟಿದ್ದಾಳೆ.
ನಾವು ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವೈರಲ್ ವಿಡಿಯೋಗಳನ್ನು ನೋಡುತ್ತೇವೆ. ಚಿರತೆಗೆ ಮಹಿಳೆ ಮುತ್ತಿಡುವುದು, ಕತ್ತೆಯ ಮೇಲೆ ಯುವಕನು ಸವಾರಿ ಮಾಡುವುದು, ಮುಗ್ದ ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಪ್ರೀತಿ ಇಂತಹ ವೈರಲ್ ವಿಡಿಯೋಗಳು ಈಗ ಸಾಮಾನ್ಯವಾಗಿದೆ. ಆದ್ರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ಪುಟ್ಟ ಬಾಲಕಿ ಬೀದಿ ನಾಯಿಗಳ ಗುಂಪಿನ ಜೊತೆ ಯಾವುದೇ ಹೆದರಿಕೆ ಇಲ್ಲದೆ ಒಂದು ನಾಯಿಯ ಮೇಲೆ ಕುಳಿತು ಸವಾರಿ ಮಾಡಿ ರಸ್ತೆ ದಾಟಿದ ವಿಡಿಯೋ ಸಖತ್ ವೈರಲ್ ಆಗಿದೆ.
ಪುಟ್ಟ ಬಾಲಕಿ ಹಾಗೂ ಬೀದಿ ನಾಯಿಗಳ ನಿಷ್ಕಲ್ಮಶ ಪ್ರೀತಿಯನ್ನು ಇಲ್ಲಿ ನೋಡಬಹುದು. ತನ್ನ ಕುಟುಂಬದವರ ರೀತಿಯಲ್ಲಿಯೇ ಅವುಗಳ ಜೊತೆ ರಸ್ತೆ ದಾಟುತ್ತಿದ್ದಾಳೆ. ಕುದುರೆಯ ರೀತಿ ಒಂದು ಬೀದಿ ನಾಯಿಯ ಮೇಲೆ ಕುಳಿತು ಸವಾರಿ ಮಾಡಿದ್ದಾಳೆ.
ಬೀದಿಯಲ್ಲಿ ಹುಡುಗಿಯ ಪಕ್ಕದಲ್ಲಿ ನಾಯಿಗಳ ಗುಂಪೊಂದು ನಡೆದುಕೊಂಡು ಹೋಗುವುದನ್ನು ಕಾಣಬಹುದು. ಜೊತೆಗೆ ಆಕೆ ಒಂದು ನಾಯಿಯನ್ನೇರಿ ಸವಾರಿ ಮಾಡಿದ್ದನ್ನು ನೊಡಿ ಎಂದು ಜನರು ಆಶ್ಚರ್ಯಚಕಿತರಾಗಿದ್ದಾರೆ. ಕುದುರೆಯಂತೆ ಆತ್ಮವಿಶ್ವಾಸದಿಂದ ಪ್ರಾಣಿಗಳ ಮೇಲೆ ಕುಳಿತು, ಹುಡುಗಿ ರಾಜಮನೆತನದವರಂತೆ ಬೀದಿಗಳಲ್ಲಿ ಹೋಗುವುದನ್ನು ಕಂಡು ಬಾಲಕಿಗೆ ಝಡ್ ಪ್ಲಸ್ ಭದ್ರತೆ ಸಿಕ್ಕಿದೆ ಎಂದು ಜನರು ಮಾತಾಡಿಕೊಂಡಿದ್ದಾರೆ.






