
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಮಾಯಕ ಮುಸ್ಲಿಮರ ಕೊಲೆಗಳು ಮತ್ತು ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಸಾಮೂಹಿಕ ರಾಜೀನಾಮೆಯ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ.
ಇಂದು ಮಧ್ಯಾಹ್ನ ನಗರದ ಬೋಳಾರದಲ್ಲಿರುವ ಶಾದಿಮಹಲ್ ಸಭಾಂಗಣದಲ್ಲಿ ಸಭೆ ಕರೆದು, ಈ ತೀರ್ಮಾನವನ್ನು ಪ್ರಕಟಿಸಿದ್ದಾರೆ.
ಜಿಲ್ಲೆಯಲ್ಲಿ ಅಮಾಯಕ ಮುಸ್ಲಿಂ ಯುವಕರ ಹತ್ಯೆ, ಮತ್ತಿತರ ಅಹಿತಕರ ಘಟನೆ ನಡೆಯುತ್ತಿದ್ದರೂ ಸರಕಾರ ಇದನ್ನೆಲ್ಲಾ ನಿಭಾಯಿಸಲು ವಿಫಲವಾಗಿದೆ ಎಂದು ಆರೋಪಿಸಿ, ಸಾಮೂಹಿಕ ರಾಜೀನಾಮೆ ಸಲ್ಲಿಸುವ ಸಲುವಾಗಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶಾದಿ ಮಹಲ್‌ನಲ್ಲಿ ಸಭೆ ಸೇರಿದ್ದರು.
ಸಭೆಯಲ್ಲಿ ಮೊದಲು ಭಾಷಣ ಮಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಮುಖ್ಯಮಂತ್ರಿ ಕರೆ ಮಾಡಿ ಮಾತನಾಡಿ ಒಂದು ವಾರದಲ್ಲಿ ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಭರವಸೆ ಈಡೇರದಿದ್ದರೆ ರಾಜೀನಾಮೆ ಕೊಡುವ ಎಂದಾಗ ಸಭೆಯಲ್ಲಿ ಕೋಲಾಹಲ ಉಂಟಾಯಿತು. ಈ ಬಗ್ಗೆ ಆಕ್ರೋಶಗೊಂಡ ಕಾರ್ಯಕರ್ತರು ಕೂಡಲೇ ರಾಜೀನಾಮೆ ನೀಡಲು ಪಟ್ಟು ಹಿಡಿದರು.
ಕೊನೆಗೆ ಸಭೆಯಲ್ಲಿ ಹಾಜರಿದ್ದ ಎಲ್ಲ ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು.






