ಕರಾವಳಿಯಲ್ಲಿ ಕೋಮು ಗಲಾಟೆ ಮತ್ತು ಪ್ರಚೋದನಕಾರಿ ಭಾಷಣಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.

ಯುಟಿ ಖಾದರ್, ಹಜ್ ಯಾತ್ರೆಗೆ ತೆರಳುವ ಮುನ್ನ ಪೊಲೀಸ್ ಕಮಿಷನರ್ ಮತ್ತು ಎಸ್ಪಿಗೆ ದ್ವೇಷ ಭಾಷಣ ಹಾಗೂ ಪ್ರಚೋದನಕಾರಿ ಬರಹಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾಗಿ ಹೇಳಿದರು. ಆದರೆ, ಆಗಿನ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದರು. ‘ನೀವು ಪೊಲೀಸರ ಕೆಲಸ ಮಾಡಿ, ವಕೀಲರ ಕೆಲಸ ಮಾಡಬೇಡಿ,’ ಎಂದು ತಾಕೀತು ಮಾಡಿದ್ದೆ ಎಂದು ಖಾದರ್ ತಿಳಿಸಿದರು. ಈಗಿನ ಹೊಸ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದು, 60% ಸಮಸ್ಯೆಗಳು ನಿಯಂತ್ರಣಕ್ಕೆ ಬಂದಿವೆ ಎಂದರು.

‘ಜೊತೆಗೆ ಆಟವಾಡುತ್ತಿದ್ದವರೇ ರಹೀಂನ ಕೊಲೆ ಮಾಡಿದ್ದಾರೆ. ಇಂತಹ ಕೊಲೆಗಾರರಿಗೆ ವಕೀಲರು ಸೇರಿದಂತೆ ಯಾರೂ ಬೆಂಬಲ ನೀಡಬಾರದು,’ ಎಂದು ಹೇಳಿದರು. ಕೊಲೆ ಆರೋಪಿಗಳಿಗೆ ಕಠಿಣ ಕಾನೂನು ಕ್ರಮವಾಗಿ, ಇಂತಹ ಘಟನೆಗಳಿಗೆ ಇಲ್ಲಿಗೇ ಅಂತ್ಯವಾಗಬೇಕು ಎಂದರು.

ಸುಹಾಸ್ ಶೆಟ್ಟಿಯವರ ಮನೆಗೆ ಭೇಟಿ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಖಾದರ್, ‘ಹಿಂದೆ ಬೇರೆ ಕೊಲೆ ಪ್ರಕರಣದಲ್ಲಿ ಭೇಟಿಗೆ ತೆರಳಲು ತಯಾರಿಯಾಗಿದ್ದೆ, ಆದರೆ ಕುಟುಂಬದವರು ಬರಬೇಡಿ ಎಂದಿದ್ದರು. ಸುಹಾಸ್ ಶೆಟ್ಟಿಯವರ ತಂದೆ-ತಾಯಿ ಕರೆದರೆ ಖಂಡಿತವಾಗಿಯೂ ಭೇಟಿಯಾಗುತ್ತೇನೆ,’ ಎಂದರು.

ನಿಕಟಪೂರ್ವ ಎಸ್ಪಿ ಯತೀಶ್ ಎನ್. ಮತ್ತು ಕಮಿಷನರ್ ಅನುಪಮ್ ಅಗರ್ವಾಲ್ ವಿರುದ್ಧ ಗೃಹ ಸಚಿವರಿಗೆ ಪತ್ರ ಬರೆದು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುವುದಾಗಿ ಖಾದರ್ ತಿಳಿಸಿದರು. ಹಿಂದಿನ ಕೆಲವು ಘಟನೆಗಳಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿತ್ತು ಎಂದು ಆರೋಪಿಸಿದರು. ‘ಬಜಿರೆಯಲ್ಲಿ ಸುಹಾಸ್ ಕೊಲೆಯಾದಾಗ ಪ್ರತೀಕಾರದ ಮಾತುಗಳು ಹರಡಿದ್ದರೂ ಪೊಲೀಸರು ಕ್ರಮ ಕೈಗೊಂಗಿರಲಿಲ್ಲ. ಇಂತಹ ಘಟನೆಗಳು ಜಿಲ್ಲೆಗೆ ಕಪ್ಪುಚುಕ್ಕೆ,’ ಎಂದರು.

ಕರಾವಳಿಯ ಕೋಮು ಗಲಾಟೆಯನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ಖಾದರ್ ಸಲಹೆ ನೀಡಿದರು. ‘ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ರಾಜಕೀಯ ಮಾಡದೆ, ಶಾಂತಿ ಸ್ಥಾಪನೆಗೆ ಒತ್ತು ನೀಡಬೇಕು,’ ಎಂದು ಹೇಳಿದರು

Leave a Reply

Your email address will not be published. Required fields are marked *

Join WhatsApp Group
error: Content is protected !!