ಮಂಗಳೂರು, ಜುಲೈ 18: ಸುಳ್ಯ ತಾಲೂಕಿನ ಅರಂತೋಡು ಗ್ರಾಮದಲ್ಲಿರುವ ಘನ ತ್ಯಾಜ್ಯ ನಿರ್ವಹಣಾ ಘಟಕ ಕಳೆದ ದಿನಗಳಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದ ಸಂಪೂರ್ಣ ಹಾನಿಗೊಳಗಾಗಿದ್ದು, ಇದೀಗ ಇದರ ಮರುಸ್ಥಾಪನೆಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ತಾವು ಹೊಂದಿರುವ ಶಾಸಕರ ಅಭಿವೃದ್ಧಿ ನಿಧಿಯಿಂದ ₹5 ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಭೇಟಿಯಾಗಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸಂಸದ ಬೃಜೇಶ್ ಚೌಟ ಮತ್ತು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರ ಮನವಿ ಪತ್ರವನ್ನೂ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಶಾಸಕರು ಮಾತನಾಡುತ್ತಾ, “ಸ್ವಚ್ಛ ಭಾರತ್ ಅಭಿಯಾನದ ಉದ್ದೇಶವನ್ನು ಸಾಧಿಸುವ ದೃಷ್ಟಿಯಿಂದ ಹೆಚ್ಚು ಹಣಕಾಸು ನೆರವು ತರಲು ಪ್ರಯತ್ನಿಸುತ್ತಿದ್ದೇವೆ. ಮುಂದಿನ ಒಂದು ತಿಂಗಳಲ್ಲಿ ಶಂಕುಸ್ಥಾಪನೆ, ಮೂರು ತಿಂಗಳಲ್ಲಿ ಘಟಕ ಕಾರ್ಯಾರಂಭಗೊಳ್ಳುವ ಗುರಿಯಿದೆ” ಎಂದರು.

ಈ ಘಟಕ ಮುಂದಿನ 20 ವರ್ಷಗಳ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಸುಸಜ್ಜಿತ ತಂತ್ರಜ್ಞಾನದಿಂದ ನಿರ್ಮಾಣಗೊಳ್ಳುತ್ತಿದ್ದು, ಸ್ಥಳೀಯ ಗ್ರಾಮಗಳ ತ್ಯಾಜ್ಯ ನಿರ್ವಹಣೆಗೆ ಬಹುಮುಖ್ಯವಾಗಲಿದೆ. ಪರಿಸರ ಸಂರಕ್ಷಣೆ, ಶುದ್ಧತೆ ಹಾಗೂ ಗ್ರಾಮೀಣ ಆರೋಗ್ಯ ಸುಧಾರಣೆಗೆ ಸಹಾಯಕವಾಗಲಿದೆ.

ಈ ಸಂದರ್ಭದಲ್ಲಿ ಶಾಸಕ ಅವರ ಜೊತೆ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಳೆ, ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್., ಸಂತೋಷ್ ಕುತ್ತಮೊಟ್ಟೆ, ಭವಾನಿ ತೊಡಿಕಾನ, ಸೇರಿದಂತೆ ಹಲವಾರು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!