
ಪುತ್ತೂರು, ಜುನ್ 21 “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷವಾಕ್ಯದೊಂದಿಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪುತ್ತೂರು ತಾಲೂಕು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅತ್ಯಂತ ಭಾವಪೂರ್ಣ ಹಾಗೂ ಶ್ರದ್ಧಾಪೂರ್ವಕವಾಗಿ ನೆರವೇರಿತು. ಕಾರ್ಯಕ್ರಮವನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ), ನೇತ್ರಾವತಿ ವಲಯದವರು ಆಯೋಜಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಭಜನೆ, ವಿಶೇಷ ಹನುಮಾನ್ ಚಾಲೀಸ್ ಪಠಣ, ಅಮೃತವಚನ ಮತ್ತು ಪಂಚಾಂಗ ಪಠಣದೊಂದಿಗೆ ಧಾರ್ಮಿಕ ವಾತಾವರಣ ನಿರ್ಮಾಣವಾಯಿತು. ಭಜನೆ ಹಾಗೂ ಚಾಲೀಸ್ ಪಠಣವನ್ನು ಸತೀಶ್ ಮತ್ತು ತಂಡ ನಡೆಸಿಕೊಟ್ಟರು. ಅಮೃತವಚನವನ್ನು ಯಶೋಧ ಕಂಬಳ ಶಾಖೆ ಮತ್ತು ಪಂಚಾಂಗ ಪಠಣವನ್ನು ಅರುಣ ಮಹಾಲಿಂಗೇಶ್ವರ ಶಾಖೆ ನೆರವೇರಿಸಿದರು.
ಮೂಲ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು. ದೀಪ ಬೆಳಗಿಸಿ ಮಾತನಾಡಿದ ದೇವಸ್ಥಾನದ ಅಧ್ಯಕ್ಷ ಕೇಶವ ಬೆದ್ರಾಳ ಯೋಗದ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ತಾಲೂಕು ಸಂಚಾಲಕ ಕೃಷ್ಣಾನಂದಣ್ಣ, ಸಂಚಾಲಕ ಹೇಮಚಂದ್ರ, ಸಹಸಂಚಾಲಕ ಜ್ಞಾನೇಶ ವಿಶ್ವಕರ್ಮ, ವಿದ್ಯಾ ಪ್ರಮುಖ ಸತೀಶ ಸುವರ್ಣ, ಹಾಗೂ ಶ್ರೀಮತಿ ಸುಜಾತ ಮತ್ತು ಶುಭ ಶೆಟ್ಟಿ ಉಪಸ್ಥಿತರಿದ್ದರು.
ಮೊದಲ ಅವಧಿಯ ಯೋಗ ಶಿಬಿರದಲ್ಲಿ ಮಾನಸಿಕ ಸಿದ್ಧತೆ, ಉಸಿರಾಟ ತಂತ್ರಗಳು, ಗಣಪತಿ, ಷಣ್ಮುಖ ಮತ್ತು ವಿಷ್ಣು ನಮಸ್ಕಾರಗಳನ್ನು ಚಂದ್ರನಾಥ ಆರ್ಯಾಪು ನೇತೃತ್ವದಲ್ಲಿ ನಡೆಸಲಾಯಿತು. ಅವರಿಗೆ ಪುಷ್ಪಲತಾ, ದೀಪಕ್ ಆರ್ಯಾಪು ಸಹಕರಿಸಿದರು.
ಎರಡನೇ ಅವಧಿಯಲ್ಲಿ, ಆಯುಷ್ ಪಠ್ಯಕ್ರಮ ಆಧಾರಿತ ಯೋಗಾಭ್ಯಾಸ, ಅಮೃತಾಸನ, ಪ್ರಾಣಾಯಾಮ ಹಾಗೂ ಧ್ಯಾನ ಕಾರ್ಯಕ್ರಮವನ್ನು ಲಕ್ಷ್ಮೀ ಸಂಪ್ಯ ಶಾಖೆ ಯಶಸ್ವಿಯಾಗಿ ನಡೆಸಿಕೊಟ್ಟರು. ಅವರನ್ನು ವಿನಯ ಅಕ್ಕ, ಸತೀಶ್, ಅಶೋಕ, ಸತೀಶ್ ಪಾಂಗಳಾಯಿ ಹಾಗೂ ಸುಮ ಸಂಪ್ಯ ಶಾಖೆಗಳ ಶಿಕ್ಷಕರು ಸಹಾಯಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅಗ್ನಿಹೋತ್ರ ಹಾಗೂ ಅನ್ನಪೂರ್ಣೇಶ್ವರಿ ಮಂತ್ರದೊಂದಿಗೆ ಪ್ರಸಾದ ವಿತರಣೆ ನಡೆಯಿತು. ಹೂವಿನ ರಂಗೋಲಿನ್ನು ದಿನೇಶ ವಿಶ್ವಕರ್ಮ ನೇತೃತ್ವದಲ್ಲಿ ರೂಪಿಸಲಾಯಿತು. ವಂದನಾರ್ಪಣೆವನ್ನು ಹೇಮಚಂದ್ರ ಕಲ್ಲೇಗ ಹಾಗೂ ನಿರೂಪಣೆನ್ನು ಶುಭ (ಶ್ರೀಚಕ್ರರಾಜರಾಜೇಶ್ವರಿ ಶಾಖೆ) ನಿರ್ವಹಿಸಿದರು.
ಪುತ್ತೂರು ತಾಲೂಕಿನ 600ಕ್ಕೂ ಅಧಿಕ ಯೋಗಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದನ್ನು ಸಾರ್ಥಕಗೊಳಿಸಿದರು.






