
ಪುತ್ತೂರು:ಅಕ್ಷಯ ಕಾಲೇಜಿನ ಬಿ.ಸಿ.ಎ ವಿಭಾಗದ “ಬೈಟ್ ಬ್ಲಿಜ್” ಐಟಿ ಕ್ಲಬ್ ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ (IQAC) ಸಹಯೋಗದಲ್ಲಿ “21ನೇ ಶತಮಾನದ ಕೌಶಲ್ಯದ ಪ್ರಾವೀಣ್ಯತೆ” ಎಂಬ ವಿಷಯದಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀ ಕಿಶನ್ ಎನ್. ರಾವ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 21ನೇ ಶತಮಾನದ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಕ್ರಾಂತಿ, ಕೃತಕ ಬುದ್ಧಿಮತ್ತೆಯ ಬಳಕೆ, ಹಾಗೂ ಬದಲಾಗುತ್ತಿರುವ ಉದ್ಯೋಗ ವಾತಾವರಣವನ್ನು ಚರ್ಚಿಸಿದ ಅವರು, ಈ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ವಿಮರ್ಶಾತ್ಮಕ ಚಿಂತನೆ, ಸಂವಹನ, ಸಹಯೋಗ, ಸೃಜನಶೀಲತೆ, ತಂತ್ರಜ್ಞಾನ ಸಾಕ್ಷರತೆ, ಸಮಸ್ಯೆ ಪರಿಹಾರ, ಉತ್ಪಾದಕತೆ ಮತ್ತು ಹೊಣೆಗಾರಿಕೆಗಳಂತಹ ಕೌಶಲ್ಯಗಳ ಪ್ರಾಮುಖ್ಯತೆಯನ್ನು ವಿವರಿಸಿದರು.
ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಕ್ಷಾ ರೈ ಪ್ರಾಸ್ತಾವಿಕ ಭಾಷಣದಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಹೊಸ ಕೌಶಲ್ಯಗಳನ್ನು ಅಳವಡಿಸಿಕೊಂಡು ಸ್ವಯಂ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಪ್ರಥಮ ಬಿ.ಸಿ.ಎ ವಿದ್ಯಾರ್ಥಿ ಚ0ಪ್ರೀತ ಪ್ರಾರ್ಥನೆ ಸಲ್ಲಿಸಿದ್ದು, ವೀಕ್ಷ ನಿರೂಪಣೆ ವಹಿಸಿದರು. ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಜ್ಞಾನವರ್ಧಕ ಹಾಗೂ ಪ್ರೇರಣಾದಾಯಕವಾಗಿ ನೆರವೇರಿತು.









