
ಮಂಗಳೂರು: ಕಾನೂನು ಸ್ಪಷ್ಟವಿದೆ, ಯಾವುದೇ ಸಾರ್ವಜನಿಕ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.
ಧ್ವನಿವರ್ಧಕ ಸಮಸ್ಯೆ ಇತ್ಯರ್ಥಪಡಿಸುವವರೆಗೆ ನಾವು ಸಾರ್ವಜನಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕಗಳನ್ನು ನೀಡದಿರಲು ನಿರ್ಧರಿಸಿದ್ದೇವೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ಬಹಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದು ದ.ಕ. ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಸಂಘದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತರು, ಬಹಿಷ್ಕಾರ ಸೇರಿದಂತೆ ಏನೇ ನಿರ್ಧಾರ ತೆಗೆದುಕೊಳ್ಳಲು ಅವರು ಸ್ವತಂತ್ರರು ಎಂದು ಹೇಳಿದ್ದಾರೆ.
ಸಾರ್ವಜನಿಕರಿಗೆ, ಹಿರಿಯರಿಗೆ ರೋಗಿಗಳಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಹಬ್ಬ ಆಚರಿಸಲು ಅವಕಾಶ ಇದೆ. ಅದರೆ ಕಾನೂನು ಸ್ಪಷ್ಟವಿದೆ, ಡಿಜೆಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಇಂದು ಸಂಜೆ ಗಣೇಶ ಹಬ್ಬದ ಆಯೋಜಕರ ಜೊತೆ ಡಿಸಿಪಿ ಮತ್ತು ಎಸಿಪಿಗಳ ಸಭೆಯನ್ನು ಕರೆಯಲಾಗಿದೆ. ಆ ಸಭೆಯಲ್ಲಿ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿ ನೀಡಲಿದ್ದೇವೆ. ನ್ಯಾಯಯುತ ಬೇಡಿಕೆಗಳಿಗೆ ನಿಯಮಗಳಲ್ಲಿ ಕೆಲವು ವಿನಾಯಿತಿ ನೀಡಬಹುದು ಎಂದು ತಿಳಿಸಿದ್ದಾರೆ.






