
ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆದ ಬುರುಡೆ ಮತ್ತು ಶವಹೂತ ಪ್ರಕರಣದ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದೆ. “ಶೇ.90ರಷ್ಟು ತನಿಖೆ ಮುಗಿದಿದೆ” ಎಂದು ಸಾರಿಗೆ ಮತ್ತು ಅಬಕಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಮುಸುಕುಧಾರಿ ಚೆನ್ನಯ್ಯ ನೀಡಿದ ಹೇಳಿಕೆಗಳು ಸುಳ್ಳಾಗುತ್ತಾ ಬಂದಂತೆ, ಪ್ರತಿದಿನವೂ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದು, ಮಂಗಳೂರು, ಬೆಂಗಳೂರು, ಹಾಸನ, ಮೈಸೂರು ಸೇರಿದಂತೆ ನೂರಾರು ವಾಹನಗಳಲ್ಲಿ ಭಕ್ತರ ಆಗಮನ ಜೋರಾಗಿದೆ.
ಈ ಹಿನ್ನೆಲೆಯಲ್ಲಿ, ಭಕ್ತಕೋಟಿಯಿಂದ ವ್ಯಕ್ತವಾಗುತ್ತಿರುವ ಭಾವನಾತ್ಮಕ ಪ್ರತಿಕ್ರಿಯೆ ಗಮನಿಸಿ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ವಿಶೇಷ ಮನವಿ ಮಾಡಿದರು. “ನಮ್ಮ ಕುಟುಂಬದ ಜೊತೆ ನಿಂತಿರುವುದಕ್ಕೆ ಧನ್ಯವಾದಗಳು. ಮಹಿಳಾ ಭಕ್ತರು ಕಣ್ಣೀರು ಹಾಕುವುದನ್ನು ನೋಡಿ ನೋವಾಗುತ್ತದೆ. ಹೋರಾಟಕ್ಕೆ ಅವಶ್ಯಕತೆಯಿಲ್ಲ. ಎಲ್ಲಾ ಸತ್ಯವನ್ನು ಧರ್ಮಸ್ಥಳ ಮಂಜುನಾಥ ಮತ್ತು ಅಣ್ಣಪ್ಪನಿಗೆ ಬಿಟ್ಟಿದ್ದೇನೆ. ಎಲ್ಲರೂ ಶಾಂತಿ ಮತ್ತು ತಾಳ್ಮೆಯಿಂದ ಇರಬೇಕು” ಎಂದು ಅವರು ಹೇಳಿದರು.
ಮೈಸೂರು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಬಹಿರಂಗ ಪತ್ರ ಬರೆದು ಹೆಗ್ಗಡೆಯವರ ಸೇವೆಯನ್ನು ಶ್ಲಾಘಿಸಿ, ಕೆಲವರ ಹುನ್ನಾರದಿಂದ ಕ್ಷೇತ್ರವನ್ನು ವಿವಾದದ ಕೇಂದ್ರವನ್ನಾಗಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಇದೇ ವೇಳೆ, ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸುತ್ತಾ, ಕರ್ನಾಟಕ ಬಿಜೆಪಿ ‘ಧರ್ಮಸ್ಥಳ ಚಲೋ’ ಕಾರ್ಯಕ್ರಮವನ್ನು ಘೋಷಿಸಿದೆ. ಸೆಪ್ಟೆಂಬರ್ 1ರಂದು ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಬಂಧನಕ್ಕೊಳಗಾದ ದೂರುದಾರ ಚೆನ್ನಯ್ಯನನ್ನು, ಎಸ್‌ಐಟಿ ಪೊಲೀಸರು ಆಗಸ್ಟ್ 30ರ ಬೆಳಗ್ಗೆ ಬಿಗಿ ಭದ್ರತೆಯೊಂದಿಗೆ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದಾರೆ.
ರಾಜಕೀಯ ನಾಯಕರ ಪ್ರವಾಹವೂ ಧರ್ಮಸ್ಥಳದಲ್ಲಿ ಜೋರಾಗಿದೆ. ಬಿಜೆಪಿ ನಾಯಕರು ಎಸ್.ಆರ್. ವಿಶ್ವನಾಥ್, ಬಿ.ವೈ. ವಿಜಯೇಂದ್ರ, ಸಿಟಿ ರವಿ, ಜೆಡಿಎಸ್ ನಾಯಕರು ಸಿಎಸ್ ಪುಟ್ಟರಾಜು, ಸಾರಾ ಮಹೇಶ್ ಮೊದಲಾದವರು ಧರ್ಮಸ್ಥಳಕ್ಕೆ ಆಗಮಿಸಿ ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದಾರೆ.






