
ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಗಳ ಅಭಿವೃದ್ದಿ ಕಾರ್ಯಗಳ ಕುರಿತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿಯವರೊಂದಿಗೆ ಶಾಸಕ ಅಶೋಕ್ ರೈ ಅವರು ಶುಕ್ರವಾರ ಮಾತುಕತೆ ನಡೆಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ದಿಗೆ ಈಗಾಗಲೇ ಮಾಸ್ಟರ್ ಪ್ಲಾನ್ ಸಿದ್ದಗೊಂಡಿದ್ದು, ಅನುದಾನ ಹಾಗೂ ಮುಜರಾಯಿ ಇಲಾಖೆಯಿಂದ ನೆರವು ದೊರಕಿಸುವ ಕುರಿತು ಚರ್ಚೆ ನಡೆಯಿತು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಸುಮಾರು 352 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿ ಕಾರ್ಯಗಳು ಜಾರಿಯಾಗಲಿದ್ದು, ಇದರ ಮಾಸ್ಟರ್ ಪ್ಲಾನ್ ಸಿದ್ದವಾಗಿದೆ ಎಂದು ಸಚಿವೆ ಗಮನಕ್ಕೆ ತರಲಾಯಿತು. ದೇವಸ್ಥಾನಕ್ಕೆ ಅಗತ್ಯವಾದ ಜಾಗ ಖರೀದಿಗೆ ಇಲಾಖೆಯ ಅನುಮತಿ ಪಡೆಯುವ ವಿಚಾರದಲ್ಲೂ ಮಾತುಕತೆ ನಡೆಯಿತು.
ಎರಡೂ ದೇವಸ್ಥಾನಗಳ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಚಿವರಿಗೆ ಸಂಪೂರ್ಣ ವಿವರ ನೀಡಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ವಿನಯಾ, ಸುಬಾಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಮುರಳೀದರ್ ರೈ ಮಟಂತಬೆಟ್ಟು ಉಪಸ್ಥಿತರಿದ್ದರು.






