ಮಂಗಳೂರು:ಉಳ್ಳಾಲ ಶಾರದೋತ್ಸವದ ವಿಸರ್ಜನ ಮೆರವಣಿಗೆಗೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಕುರಿತು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದರು.

“ಕೆಲವರು ತಮ್ಮ ಲಾಭಕ್ಕಾಗಿ ಮೊಗವೀರ ಸಮುದಾಯದವರನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ನಿಜವಾಗಿ ಸಹಾಯ ಮಾಡಬೇಕೆಂದರೆ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಅಭಿವೃದ್ಧಿಯ ಮೂಲಕ ಅವರನ್ನು ಮೇಲಕ್ಕೆ ತರುವುದು ಸೂಕ್ತ” ಎಂದು ಹೇಳಿದರು.

ಮೆರವಣಿಗೆಯ ಆಯೋಜಕರು ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಮುಗಿಸುವ ಭರವಸೆ ನೀಡಿದ್ದರೂ, ನಿಗದಿತ ಸಮಯ ಮೀರಿ ಮುಂದುವರೆದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಂಗೀತ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಕಾನೂನು ಪ್ರಕಾರ ಒಂದು ಗಂಟೆಯವರೆಗೆ ಮಾತ್ರ ಸಂಗೀತಕ್ಕೆ ಅವಕಾಶವಿದೆ. ಆದರೆ ಪಿಎಸ್‌ಐ ಮೈಕ್ ಆಫ್ ಮಾಡಲು ತೆರಳಿದಾಗ, ಅಲ್ಲಿದ್ದ ವ್ಯಕ್ತಿಯೊಬ್ಬ ಅವಾಚ್ಯವಾಗಿ ನಿಂದಿಸಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಮೂವರನ್ನು ವಶಕ್ಕೆ ಪಡೆಯಬೇಕಾಯಿತು. ಇದರಿಂದ ಆಕ್ರೋಶಗೊಂಡ ಕೆಲವರು ಶಾರದಾ ಮೂರ್ತಿಯನ್ನು ರಸ್ತೆಯಲ್ಲಿ ಬಿಟ್ಟು ಠಾಣೆಗೆ ಬಂದು ಜಮಾಯಿಸಿದ್ದು, ದೇವರಿಗೆ ಅವಮಾನ ಮಾಡಿದಂತಾಗಿದೆ ಎಂದು ಪೊಲೀಸ್ ಆಯುಕ್ತರು ಆರೋಪಿಸಿದರು.

ಘಟನೆಯ ಬಳಿಕ ಡಿಸಿಪಿ ಸ್ಥಳಕ್ಕೆ ಬಂದು ಮಾತುಕತೆ ನಡೆಸಿ, ಇಬ್ಬರನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಮೆರವಣಿಗೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಶಾಂತಿ ಕದಡುವ ಸಂದೇಶ – ಪ್ರಕರಣ ದಾಖಲು

ಉಳ್ಳಾಲ ಶಾರದೋತ್ಸವ ಗಲಾಟೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಕದಡುವ ಸಂದೇಶ ಹಾಕಿದ ಪ್ರಕರಣ ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅ.6 ರಂದು ಫೇಸ್‌ಬುಕ್‌ನಲ್ಲಿ ಗಲಾಟೆಯ ವೀಡಿಯೊ ಲಿಂಕ್ ಪೋಸ್ಟ್ ಆಗಿದ್ದು, ಶೈಲೇಶ್ ಕಾಶಿಪಟ್ನನ ಸಂದೇಶಕ್ಕೆ ಪ್ರತಿಯಾಗಿ ಆಯಿಷಾ ಮೊಹಮ್ಮದ್ ಎಂಬ ಖಾತೆಯ ಬಳಕೆದಾರರು ಪ್ರಚೋದನಕಾರಿ ಕಾಮೆಂಟ್ ಹಾಕಿದರೆಂದು ದೂರು ನೀಡಲಾಗಿದೆ. ಸಾಮಾಜಿಕ ಶಾಂತಿಗೆ ಧಕ್ಕೆ ಉಂಟು ಮಾಡಿದ ಕಾರಣ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!