ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತ ಸೀರಿಯಲ್ ನಟಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಕಿರುಕುಳ ನೀಡಿದ ಕಾಮುಕನೊಬ್ಬನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.
ನಟಿ ನೀಡಿದ ದೂರು ಆಧರಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ವಶಕ್ಕೆ ಪಡೆದಿದೆ.
ನವೀನ್ ಬಂಧಿತ ಆರೋಪಿ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಮೊದಲು ‘NAVEENZ’ ಎಂಬ ಫೇಸ್‌ಬುಕ್ ಖಾತೆಯಿಂದ ನಟಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ನಟಿ ಅದನ್ನು ಸ್ವೀಕರಿಸದ ಹಿನ್ನೆಲೆ ಮೆಸೆಂಜರ್ ಮೂಲಕ ಮೆಸೇಜ್ ಮಾಡತೊಡಗಿದ್ದಾನೆ. ದಿನ ಕಳೆದಂತೆ ಕಿರುಕುಳದ ಪ್ರಮಾಣ ಹೆಚ್ಚಾಗಿದ್ದು, ತೆಲುಗು ಹಾಗೂ ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ನಟಿಗೆ ಅಶ್ಲೀಲ ವಿಡಿಯೋ ಕಳುಹಿಸುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಆರೋಪಿಗೆ ಹಲವು ಬಾರಿ ನಟಿ ಎಚ್ಚರಿಕೆ ನೀಡಿದರೂ, ಕಿರುಕುಳ ನಿಲ್ಲದ ಹಿನ್ನೆಲೆಯಲ್ಲಿ ನಟಿ ಆರೋಪಿಯ ಅಕೌಂಟ್ ಬ್ಲಾಕ್ ಮಾಡಿದ್ದರು. ಆದಾಗ್ಯೂ, ಆತ ಬೇರೆ ಖಾತೆಯಿಂದ ಮತ್ತೆ ಮೆಸೇಜ್ ಮಾಡಿ ವಿಕೃತ ವರ್ತನೆ ಮುಂದುವರಿಸಿದ್ದಾನೆ. ನವೆಂಬರ್ 1ರಂದು ನಟಿ ಸ್ವತಃ ಆರೋಪಿಯನ್ನು ನಾಗರಭಾವಿಯ ನಂದನ್ ಪ್ಯಾಲೆಸ್ ಬಳಿ ಭೇಟಿ ಮಾಡಿ ಎಚ್ಚರಿಕೆ ನೀಡಿದರೂ ಕೂಡ ಬದಲಾವಣೆಯಾಗಲಿಲ್ಲ.
ಇದರಿಂದ ಬೇಸತ್ತ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪೊಲೀಸರ ತನಿಖೆ ಮುಂದುವರಿದಿದೆ.














