
ಪುತ್ತೂರು/ಕಾಸರಗೋಡು: ಶಿಕ್ಷಣ, ಸಾಹಿತ್ಯ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಸತತ ಸೇವೆ ಸಲ್ಲಿಸಿ ಗಮನಾರ್ಹ ಸಾಧನೆ ಮಾಡಿರುವ ಪುತ್ತೂರು ಬೊಳುವಾರು ನಿವಾಸಿ ಡಾ. ಶಾಂತಾ ಅವರಿಗೆ ಸ್ವರ್ಣ ಭೂಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ – 2025 ನೀಡಿ ಗೌರವಿಸಲಾಯಿತು.
ನುಳ್ಳಿಪ್ಪಾಡಿ ಸೀತಮ್ಮ ಪುರುಷನಾಯಕ ಕನ್ನಡ ಭವನ ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಹಾಗೂ ಕೋಲಾರದ ಸ್ವರ್ಣ ಭೂಮಿ ಫೌಂಡೇಶನ್ (ರಿ.) ವತಿಯಿಂದ ನ.15ರಂದು ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ ವೇದಿಕೆಯಲ್ಲಿ ನಡೆದ ಕಾಸರಗೋಡು ಗಡಿನಾಡ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ. ಶಾಂತಾ ಅವರು 31 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಸರ್ಕಾರಿ ಪ್ರೌಢಶಾಲೆ ಕಬಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿರುವ ಅವರು ಯೋಗದಲ್ಲಿ ಡಿಪ್ಲೋಮಾ ಪಡೆದಿದ್ದು, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ರಾಜ್ಯಮಟ್ಟದ ಯೋಗಾಸನ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ‘ಸೌರಭ’ ಕವನ ಸಂಕಲನ ಲೋಕಾರ್ಪಣೆಗೊಂಡಿದ್ದು, ಹಲವು ಕವಿಗೋಷ್ಠಿಗಳ ಅಧ್ಯಕ್ಷತೆ ವಹಿಸಿ ಸಾಹಿತ್ಯ ಕಮ್ಮಟ ಹಾಗೂ ವಿಚಾರಗೋಷ್ಠಿಗಳನ್ನು ನಡೆಸಿದ್ದಾರೆ.
ಪ್ರಸ್ತುತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷರಾಗಿರುವ ಅವರು, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕಾಸರಗೋಡು – ಕರ್ನಾಟಕ ರಾಜ್ಯ ಸಂಚಾಲಕಿ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಹುಬ್ಬಳ್ಳಿ (ರಿ.) ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಗೈಡ್ಸ್ ಲಾಂಗ್ ಸರ್ವೀಸ್ ಅವಾರ್ಡ್, ಯೋಗಭೂಷಣ ಪ್ರಶಸ್ತಿ, ಡಾ. ರಾಜ್ ಕುಮಾರ್ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ಶಿಕ್ಷಣ ಸಾಹಿತ್ಯ ಸಂಘಟನೆಯಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಆಕಾಶವಾಣಿಯ ವನಿತಾವಾಣಿಯಲ್ಲಿ ಇವರ ಸಂದರ್ಶನವೂ ಪ್ರಸಾರವಾಗಿದೆ.
ಕಾರ್ಯಕ್ರಮದ ವೇದಿಕೆಯಲ್ಲಿ ಡಾ. ವಾಮನ್ ರಾವ್ ಬೇಕಲ್, ಬಿ. ಶಿವಕುಮಾರ್, ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ಸಂಧ್ಯಾ ರಾಣಿ ಟೀಚರ್, ಸಾಹಿತಿ ವಿರಾಜ್ ಅಡೂರು, ವಸಂತ ಕೆರೆಮನೆ, ರವಿ ನಾಯ್ಕಾಪು, ಪ್ರೊ. ಇ. ಶ್ರೀನಾಥ್, ಬೊಳ್ಳಜಿರ ಅಯ್ಯಪ್ಪ, ರುಬಿನಾ ಎಂ.ಎ., ಜಯಾನಂದ ಪೆರಾಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






