
ಮಂಗಳೂರು, ನ.22: ಕೇರಳ ರಾಜ್ಯದ ಕಣ್ಣೂರು ವಲಯದ ಡಿಐಜಿಪಿ ಶ್ರೀ ಯತೀಶ್ಚಂದ್ರ ಜಿ.ಹೆಚ್., ಐಪಿಎಸ್ ಹಾಗೂ ಕಾಸರಗೋಡು ಎಸ್‌ಪಿ ಶ್ರೀ ವಿಜಯ ಭರತ್ ರೆಡ್ಡಿ, ಐಪಿಎಸ್ ಅವರು ಶನಿವಾರ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯಕ್ಕೆ ಭೇಟಿ ನೀಡಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್., ಐಪಿಎಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗಡಿ ಅಪರಾಧ ಸಂಯೋಜನಾ ಸಭೆಯಲ್ಲಿ (ಬಾರ್ಡರ್ ಕ್ರೈಂ ಮೀಟಿಂಗ್) ಮಂಗಳೂರು ನಗರ ಕಮಿಷನರೇಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಉಭಯ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಕುರಿತು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ತಲೆಮರೆಸಿಕೊಂಡಿರುವ ಆರೋಪಿಗಳು, ವಾರಂಟ್ ಅಸಾಮಿಗಳು, ಅಂತರ್‌ರಾಜ್ಯ ಅಪರಾಧ ಪ್ರಕರಣಗಳು, ಮಾದಕದ್ರವ್ಯ ಸಾಗಾಣಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು.
ಇದಲ್ಲದೆ, ಎರಡೂ ರಾಜ್ಯಗಳಲ್ಲಿ ದಾಖಲಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಾಗೂ ಗಡಿ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಮತ್ತು ವಾರಂಟ್ ಅಸಾಮಿಗಳ ಪತ್ತೆಗಾಗಿ ಕಾರ್ಯಯೋಜನೆ ರೂಪಿಸಲಾಯಿತು. ಅಪರಾಧಗಳ ನಿಯಂತ್ರಣ ಹಾಗೂ ಪತ್ತೆ ಕಾರ್ಯದಲ್ಲಿ ಪರಸ್ಪರ ಸಹಕಾರ ಮತ್ತು ಜಂಟಿ ಕಾರ್ಯಾಚರಣೆಗಳ ಬಗ್ಗೆ ಸಹ ಸಭೆಯಲ್ಲಿ ಚರ್ಚಿಸಲಾಯಿತು.






