
ಪುತ್ತೂರು: ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿರುವ ಸುದಾನ ಪದವಿ ಪೂರ್ವ ಕಾಲೇಜಿನ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಉತ್ಸವ “ಸುದಾನ ಲೂಮಿಯ 2025 – Spark the Spirit, Shine the Stage” ಕಾರ್ಯಕ್ರಮವು ಕಾಲೇಜಿನ ಎಡ್ವರ್ಡ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾಲೇಜಿನ ಅಧ್ಯಕ್ಷ ವಿಜಯ್ ಹಾರ್ವಿನ್ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಲೂಮಿಯ’ ಎಂಬ ಹೆಸರಿನ ಅರ್ಥ ಜ್ಞಾನ ಎಂಬ ಬೆಳಕು. ವಿದ್ಯಾರ್ಥಿಗಳಲ್ಲಿರುವ ಗುಪ್ತ ಪ್ರತಿಭೆಯನ್ನು ಹೊರತರಲು ಇಂತಹ ವೇದಿಕೆಗಳು ಅಗತ್ಯವೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಸಂಚಾಲಕ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಯುವಕರು ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸ ಇಟ್ಟು ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಯುವಶಕ್ತಿಯೇ ಸಮಾಜದ ಭವಿಷ್ಯವನ್ನು ರೂಪಿಸುವ ಶಕ್ತಿ ಎಂದು ಅಭಿಪ್ರಾಯಪಟ್ಟರು.
ದಿನವಿಡೀ ನಡೆದ ಸಾಂಸ್ಕೃತಿಕ, ಬೌದ್ಧಿಕ ಹಾಗೂ ಸೃಜನಾತ್ಮಕ ಸ್ಪರ್ಧೆಗಳಲ್ಲಿ ಅನೇಕ ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕಲಾತ್ಮಕತೆ ಮತ್ತು ಚಾತುರ್ಯದಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ವಿದ್ಯಾರ್ಥಿಗಳ ಪ್ರದರ್ಶನಗಳು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಕಲ್ಲಡ್ಕ ವಸ್ತು ಸಂಗ್ರಹಾಲಯದ ಮಾಲಕರಾದ ಮಹಮ್ಮದ್ ಯಾಸಿರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜು ಕೋಶಾಧಿಕಾರಿ ಆಸ್ಕರ್ ಆನಂದ್, ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್, ಪ್ರಾಂಶುಪಾಲ ಸುಪ್ರೀತ್ ಕೆ.ಸಿ. ಹಾಗೂ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಕೌಶಲ್ಯ ಅಭಿವೃದ್ಧಿಯಾಗುತ್ತದೆ. ಸೋಲು-ಗೆಲುವಿಗಿಂತ ಭಾಗವಹಿಸುವುದೇ ಮುಖ್ಯ ಎಂದರು.
ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಜೀವನದ ಪ್ರತಿಯೊಂದು ಅನುಭವವೂ ಪಾಠವಾಗಿದ್ದು, ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಖಚಿತ ಎಂದು ಹೇಳಿದರು.
ಗಣಿತ ಉಪನ್ಯಾಸಕಿ ಧನ್ಯ ಶ್ರೀ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಪಲ್ಲವಿ ವರದಿ ವಾಚಿಸಿ ಸ್ಪರ್ಧೆಗಳ ವಿಜೇತರನ್ನು ಘೋಷಿಸಿದರು. ಜೀವಶಾಸ್ತ್ರ ವಿಭಾಗದ ಅಕ್ಷತಾ ಮತ್ತು ರಸಾಯನಶಾಸ್ತ್ರ ವಿಭಾಗದ ರಚನಾ ವಂದಿಸಿದರು. ವಾಣಿಜ್ಯ ವಿಭಾಗದ ಲತಾಶ್ರೀ ಹಾಗೂ ಆಂಗ್ಲ ವಿಭಾಗದ ಮೆಲಿಷ ಪ್ರಿಯ ಕಾರ್ಯಕ್ರಮ ನಿರೂಪಿಸಿದರು.






