ಪುತ್ತೂರು:ರೋಟರಿ ಕ್ಲಬ್ ಪುತ್ತೂರು ತನ್ನ ಕನಸಿನ ಶಾಶ್ವತ ಯೋಜನೆಯಾದ “ಪುತ್ತೂರು ರೋಟರಿ ಮ್ಯಾಮೋಗ್ರಾಫಿ ಸೆಂಟರ್” ಅನ್ನು ನವೆಂಬರ್ 28ರಂದು ಬೊಳ್ವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಉದ್ಘಾಟಿಸಲಿದೆ.

ಜಿಲ್ಲೆಯ ಹಿರಿಯ ಕ್ಲಬ್‌ಗಳಲ್ಲೊಂದು ಎನ್ನಲಾದ ರೋಟರಿ ಕ್ಲಬ್ ಪುತ್ತೂರು ಈಗ ತನ್ನ 60ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದು, ಅಂತರರಾಷ್ಟ್ರೀಯ ರೋಟರಿ ಫೌಂಡೇಶನ್‌ನ ಗ್ಲೋಬಲ್ ಗ್ರಾಂಟ್ ಯೋಜನೆಯಡಿ ಈ ಮಹತ್ವದ ಆರೋಗ್ಯ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಯೋಜನೆಗೆ ಸುಮಾರು ರೂ. 65 ಲಕ್ಷ ವೆಚ್ಚವಾಗಿದ್ದು, ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181ರ ವಲಯ–5ರ ರೋಟರಿ ಕ್ಲಬ್ ಪುತ್ತೂರು ಹಾಗೂ ಅಮೆರಿಕದ ಜಿಲ್ಲೆ 6540ರ ರೋಟರಿ ಕ್ಲಬ್ ರೇರ್‌ವಿಲ್, ಯು.ಎಸ್.ಎ ಸಹಭಾಗಿತ್ವ ವಹಿಸಿವೆ.

ಉದ್ಘಾಟನಾ ಸಮಾರಂಭವನ್ನು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ ಅವರು ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜ ಭಾಗವಹಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಎ.ಆರ್.ಆರ್.ಎಫ್.ಸಿ ಕೃಷ್ಣ ಶೆಟ್ಟಿ, ಡಿ.ಆರ್.ಎಫ್.ಸಿ ರಂಗನಾಥ ಭಟ್, ನಿಕಟಪೂರ್ವ ಜಿಲ್ಲಾ ಗವರ್ನರ್ ವಿಕ್ರಂ ದತ್ತ, ವಲಯ–5ರ ಸಹಾಯಕ ಗವರ್ನರ್ ಬಾಲಕೃಷ್ಣ ಪೈ ಮತ್ತು ವಲಯ ಸೇನಾನಿ ಉಮಾನಾಥ್ ಪಿ.ಬಿ ಅವರು ಉಪಸ್ಥಿತರಿರಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ., ಕಾರ್ಯದರ್ಶಿ ಪ್ರೊ. ಸುಬ್ಬಪ್ಪ ಕೈಕಂಬ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಯು. ಶ್ರೀಪತಿ ರಾವ್ ಹಾಗೂ ಯೋಜನಾ ಅಧ್ಯಕ್ಷ ಡಾ. ಶ್ಯಾಮ್ ಬಿ. ಅವರು, ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಮ್ಯಾಮೋಗ್ರಾಫಿ ಕೇಂದ್ರ ಮಹತ್ವದ ಸೇವೆಯಾಗಿ ರೂಪುಗೊಳ್ಳಲಿದೆ ಎಂದಿದ್ದಾರೆ.

ಸಮಾಜಕ್ಕೆ ಶಾಶ್ವತ ಕೊಡುಗೆ

60 ವರ್ಷಗಳ ಇತಿಹಾಸ ಹೊಂದಿರುವ ರೋಟರಿ ಕ್ಲಬ್ ಪುತ್ತೂರು ಈಗಾಗಲೇ
– ಸುಸಜ್ಜಿತ ಬ್ಲಡ್ ಬ್ಯಾಂಕ್,
– ಡಯಾಲಿಸಿಸ್ ಸೆಂಟರ್,
– ಬ್ಲಡ್ ಕಲೆಕ್ಷನ್ ವಾಹನ,
– ರೋಟರಿ ಕಣ್ಣಿನ ಆಸ್ಪತ್ರೆ,
– ರೋಟರಿ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್,
– ರೋಟರಿಪುರದಲ್ಲಿ ಮನೆಗಳ ನಿರ್ಮಾಣ

ಇತ್ಯಾದಿ ಶಾಶ್ವತ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ.

ಇದೀಗ ಮ್ಯಾಮೋಗ್ರಾಫಿ ಸೆಂಟರ್ ಉದ್ಘಾಟನೆಯ ಮೂಲಕ ರೋಟರಿ ಕ್ಲಬ್ ಪುತ್ತೂರು ತನ್ನ ಮುಕುಟಕ್ಕೆ ಮತ್ತೊಂದು ಗರಿಯನ್ನು ಪೊಡಗಿಸಿಕೊಂಡಂತಾಗಿದೆ.

ಕನಸಿನ ಯೋಜನೆ:

ಮ್ಯಾಮೋಗ್ರಾಫಿ ಸೆಂಟರ್ ರೋಟರಿ ಕ್ಲಬ್‌ನ ಕನಸಿನ ಯೋಜನೆಯಾಗಿದೆ. 23ನೇ ಇಸವಿಯಲ್ಲಿ ಅಧ್ಯಕ್ಷರಾಗಿದ್ದ ಜೈರಾಜ್ ಭಂಡಾರಿ ಮತ್ತು ಅದರ ನಂತರ ಅಧ್ಯಕ್ಷ ಡಾ. ಶ್ರೀಪತಿ ರಾವ್ ಅವರು ಈ ಯೋಜನೆಗೆ ಬೆಳಕು ಚೆಲ್ಲಿದ್ದರು. ಇದೀಗ ಅದು ಕೂಡಿ ಬಂದಿದೆ. ಇದು ಚಿಕಿತ್ಸೆಯ ಸಾಧನವಲ್ಲ. ಇಲ್ಲಿ ರೋಗವನ್ನು ಪತ್ತೆ ಮಾಡುವ ವಿಧಾನ ಮಾತ್ರ. ರೋಗದ ದೃಢೀಕರಣಕ್ಕೆ ವರದಿಯನ್ನು ಮಂಗಳೂರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ರೋಗ ಲಕ್ಷದ ಕುರಿತು ವರದಿ ಬರುತ್ತದೆ. ರೋಗದ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳಬೇಕಾಗುತ್ತದೆ ಎಂದು ಪ್ರಾಜೆಕ್ಟ್ ಚೇಯರ್‌ಮ್ಯಾನ್ ಡಾ. ಶ್ಯಾಮ ಬಿ ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬುಲೆಟಿನ್ ಎಡಿಟರ್ ವಿ.ಜೆ ಪೆರ್ನಾಂಡಿಸ್‌, ಜೊತೆಕಾರ್ಯದರ್ಶಿ ಲೊಯಲ್ ಮೆವಾಡ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!