
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಜ.24 ಮತ್ತು 25ರಂದು ನಡೆಯಲಿರುವ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳ ಕಾರ್ಯಕ್ರಮದ ಯಶಸ್ಸಿಗಾಗಿ ಕೋಟಿ ಚೆನ್ನಯ ಕಂಬಳ ಸಮಿತಿಯಿಂದ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, 33 ವರ್ಷದ ಇತಿಹಾಸ ಹೊಂದಿರುವ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳವು ಈ ಬಾರಿ ಅತ್ಯಂತ ಸಂಭ್ರಮ–ಸಡಗರದಿಂದ ನಡೆಯುವಂತೆ ಸಿದ್ಧತೆ ಕೈಗೊಳ್ಳಲಾಗಿದೆ. ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಅವರ ನೇತೃತ್ವದಲ್ಲಿ ಹಗಲು–ರಾತ್ರಿ ಎನ್ನದೆ ಕಾರ್ಯಗಳು ನಡೆಯುತ್ತಿದ್ದು, ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
35 ವರ್ಷಗಳ ಹಿಂದೆ ನಿಂತುಹೋಗಿದ್ದ ಕಂಬಳವನ್ನು ದಿವಂಗತ ಜಯಂತ ಕುಮಾರ್ ರೈ ಅವರ ನೇತೃತ್ವದಲ್ಲಿ ಪುನಾರಾರಂಭಿಸಲಾಯಿತು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಶಾಸಕರಾಗಿದ್ದ ಅವಧಿಯಲ್ಲಿಯೂ, ನಂತರವೂ ಕಂಬಳಕ್ಕೆ ನಿರಂತರ ಬೆಂಬಲ ನೀಡಿದ್ದಾರೆ. ಅವರು ಇಂದು ಮಾಜಿ ಶಾಸಕರಾದರೂ ಕಂಬಳದ ಮೇಲಿನ ಅಭಿಮಾನದಿಂದ ಯಶಸ್ಸಿಗಾಗಿ ದುಡಿಯುತ್ತಿದ್ದಾರೆ. ಅವರ ಸಹಕಾರ ಮುಂದೆಯೂ ಅಗತ್ಯವಿದೆ ಎಂದರು. ಕಂಬಳ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸರಕಾರವು ರಾಜ್ಯದ ಪ್ರತಿಯೊಂದು ಕಂಬಳಕ್ಕೂ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಪುತ್ತೂರಿನ ಕಂಬಳ ಯಶಸ್ಸಿನ ಹಿಂದೆ ಶಾಸಕ ಅಶೋಕ್ ಕುಮಾರ್ ರೈ ಅವರ ಸಂಪೂರ್ಣ ಸಹಕಾರವಿದೆ ಎಂದು ಸೊರಕೆ ಹೇಳಿದರು.
ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮಾತನಾಡಿ, ಕಳೆದ 33 ವರ್ಷಗಳಿಂದ ಕೋಟಿ ಚೆನ್ನಯ ಕಂಬಳವನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಪುತ್ತೂರಿನ ಕಂಬಳಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಬರಬೇಕು ಎಂಬ ಉದ್ದೇಶದಿಂದ ಯಾವುದೇ ಸ್ವಾರ್ಥವಿಲ್ಲದೆ ಸೇವೆ ಸಲ್ಲಿಸಲಾಗುತ್ತಿದೆ ಎಂದರು. ಮಹಾಲಿಂಗೇಶ್ವರನ ಆಶೀರ್ವಾದದಿಂದಲೇ ಈ ಕಂಬಳ ವರ್ಷದಿಂದ ವರ್ಷಕ್ಕೆ ಯಶಸ್ವಿಯಾಗುತ್ತಿದೆ. ಆದರೆ ವೆಚ್ಚಗಳು ಹೆಚ್ಚಾಗುತ್ತಿದ್ದು, ಕಂಬಳ ಮುಗಿದ ತಕ್ಷಣ ಎರಡು ಹೊಸ ಕರೆಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಇದಕ್ಕಾಗಿ ಸುಮಾರು 16,000 ಕಲ್ಲುಗಳು ಹಾಗೂ 60 ಲೋಡ್ ಮರಳು ಅಗತ್ಯವಿದೆ ಎಂದು ತಿಳಿಸಿದರು.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ, ಕಂಬಳದ ಸಂಪೂರ್ಣ ಯಶಸ್ಸಿಗೆ ಚಂದ್ರಹಾಸ ಶೆಟ್ಟಿ ಅವರ ನೇತೃತ್ವದಲ್ಲಿ ಎಲ್ಲರೂ ಶಕ್ತಿಮೀರಿ ದುಡಿಯಬೇಕು. ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಈ ಬಾರಿಯ ಕೋಟಿ ಚೆನ್ನಯ ಕಂಬಳ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಾಗೂ ಕಂಬಳ ಸಮಿತಿಯ ಕೋಶಾಧಿಕಾರಿ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಕೋಟಿ ಚೆನ್ನಯ ಜೋಡುಕರೆ ಕಂಬಳವು ಪುತ್ತೂರಿನ ಐತಿಹಾಸಿಕ ಹಾಗೂ ಹೆಸರುವಾಸಿಯಾದ ಕ್ರೀಡೆಯಾಗಿದೆ. ಕೋಣಗಳ ನಿರ್ವಹಣೆ, ಸೇರುವ ಜನಸಂಖ್ಯೆ ಹಾಗೂ ಅಚ್ಚುಕಟ್ಟಾದ ಆಯೋಜನೆಯ ವಿಷಯದಲ್ಲಿ ಪುತ್ತೂರಿನ ಕಂಬಳ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಕಂಬಳ ಆಯೋಜನೆಯ ವೇಳೆ ಉಂಟಾಗುವ ಸಣ್ಣ ಸಮಸ್ಯೆಗಳನ್ನು ತಕ್ಷಣ ಸಂಬಂಧಪಟ್ಟವರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಕಂಬಳ ಸಮಿತಿಯು ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರ ನೇತೃತ್ವದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅನ್ನದಾನ ಯೋಜನೆಗೆ 15 ಕ್ವಿಂಟಾಲ್ ಅಕ್ಕಿ ನೀಡಲು ಮುಂದಾಗಿದ್ದು, ಈಗಾಗಲೇ ಅರ್ಧದಷ್ಟು ಅಕ್ಕಿ ದೇವಸ್ಥಾನಕ್ಕೆ ತಲುಪಿದೆ. ಉಳಿದ ಅಕ್ಕಿಯನ್ನು ಅಗತ್ಯವಿರುವ ಸಂದರ್ಭದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ರಾಜೀವ ಶೆಟ್ಟಿಗೆ ಸನ್ಮಾನ:
ಈ ಸಂದರ್ಭದಲ್ಲಿ ರಾಜ್ಯ ಕಂಬಳ ಸಮಿತಿಯ ತೀರ್ಪುಗಾರರ ಸಂಘದ ಉಪಾಧ್ಯಕ್ಷ ಹಾಗೂ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಗೌರವ ಸಲಹೆಗಾರ ರಾಜೀವ ಶೆಟ್ಟಿ ಎಡ್ತೂರು ಅವರನ್ನು ಸನ್ಮಾನಿಸಲಾಯಿತು.
ಆರ್ಯಾಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮುಹಮ್ಮದ್ ಅಲಿ,ಕಂಬಳ ಸಮಿತಿಯ ಸಂಚಾಲಕ ವಸಂತ ಕುಮಾರ್ ರೈ ಜೆ.ಕೆ., ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ. ಉಪಾಧ್ಯಕ್ಷರಾದ ಶಿವರಾಮ ಆಳ್ವ ಕುರಿಯ, ಜೋಕಿಂ ಡಿಸೋಜಾ,ಜಿನ್ನಪ್ಪ ಪೂಜಾರಿ ಮುರ, ಶಶಿಕಿರಣ್ ರೈ ನೂಜಿಬೈಲು, ಪ್ರೇಮಾನಂದ ನ್ಯಾಕ್, ರೋಷನ್ ರೈ ಬನ್ನೂರು, ರಂಜಿತ್ ಬಂಗೇರ, ಗಂಗಾಧರ ಶೆಟ್ಟಿ ಪನಡ್ಕ, ಪ್ರಶಾಂತ ರೈ ವಿಕ್ರಂ ಶೆಟ್ಟಿ ಅಂತರ,, ಸುಮಿತ್ ಶೆಟ್ಟಿ ಕಂಬಳಬೆಟ್ಟು, ಸುಶಾಂತ್ ಶೆಟ್ಟಿ ಕಂಬಳಬೆಟ್ಟು ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಕುಮಾರ್ , ಪ್ರಶಾಂತ್ ಮುರ, ದಾಮೋದರ ಮುರ, ಸಂತೋಷ್ ಕುಮಾರ್, ಅಭಿಷೇಕ್ ಬೆಳ್ಳಿಪಾಡಿ, ಸುದೇಶ್ ಕುಮಾರ್ ನ್ಯಾಕ್, ಉಮೇಶ್ ಕರ್ಕೇರ, ಶರತ್ ಕೇಪುಳು, ರಾಕೇಶ್ ಶೆಟ್ಟಿ ಮಠಂತಬೆಟ್ಟು, ಕಿರಣ್ ಡಿಸೋಜ, ಯೋಗೀಶ್ ಸಾಮಾನಿ, ಖಾದರ್ ಪೋಳ್ಯ ಸನತ್ ರೈ ಒಳತಡ್ಕ, ದಾಮೋದರ, ಗಣೇಶ್ ರಾಜ್ ಬಿಳಿಯೂರು, ಮಂಜುನಾಥ ಗೌಡ ಬನ್ನೂರು, ಬಿಪಿನ್ ಶೆಟ್ಟಿ, ವಿಲ್ಪ್ರೇಡ್ ಡಿಸೋಜಾ, ರಾಜೇಶ್ ಶೆಟ್ಟಿ ಕೆಮ್ಮಾರ, ದೀಕ್ಷಿತ್ ಚಿಕ್ಕ ಪುತ್ತೂರು,ಕಾರ್ತಿಕ್ ಚಿಕ್ಕಪುತ್ತೂರು, ಕಿಶೋರ್ ತಾರಿಗುಡ್ಡೆ, ರಕ್ಷಿತ್ ಚಿಕ್ಕ ಪುತ್ತೂರು, ಲೋಕೇಶ್ ಪಡ್ಡಾಯೂರು, ಸುಹಾಸ್, ದಾಮೋದರ ಶೆಟ್ಟಿ, ರಫೀಕ್ ಎಂ.ಕೆ. ಜಗದೀಶ್ ಗೀತ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಕಂಬಳ ಸಮಿತಿಯ ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿ, ವಂದಿಸಿದರು
ಶಾಸಕರಿಗೆ ಅಭಿನಂದನೆ:
ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಪುತ್ತೂರಿನ ಕಂಬಳಕ್ಕೆ ಮಾತ್ರವಲ್ಲದೆ ರಾಜ್ಯದ ಎಲ್ಲಾ ಕಂಬಳಗಳಿಗೆ ಸರಕಾರದ ವತಿಯಿಂದ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲು ಶಕ್ತಿಮೀರಿ ದುಡಿದಿದ್ದಾರೆ. ಇದಕ್ಕಾಗಿ ಸಮಸ್ತ ಜನರ ಪರವಾಗಿ ಹಾಗೂ ಕಂಬಳ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದು ಅಧ್ಯಕ್ಷ ಚಂದ್ರಹಾಸ ಶೆಟ್ಟಿ ತಿಳಿಸಿದರು.






