ಪುತ್ತೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪುತ್ತೂರು ಶಾಖೆಯ 7ನೇ ವಾರ್ಷಿಕೋತ್ಸವದ ಪ್ರಯುಕ್ತ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ಘಟಕ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವದ ಸಹಯೋಗದಲ್ಲಿ, ಮಂಗಳೂರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರ ತಂಡದ ಮೂಲಕ ರವಿವಾರ ಪುತ್ತೂರು ಪತ್ರಿಕಾ ಭವನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

ಶಿಬಿರವನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ವಾಸು ನಾಯ್ಡ್ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸೇವಾ ಕಾರ್ಯ ಶ್ಲಾಘನೀಯವೆಂದು ಹೇಳಿದರು. ಸಂಘದ ಮೂಲಕ ಇದುವರೆಗೆ 96 ಆರೋಗ್ಯ ಶಿಬಿರಗಳು ಆಯೋಜಿಸಲ್ಪಟ್ಟಿದ್ದು, 14 ಸಾವಿರಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದಿದ್ದಾರೆ. ಕಣ್ಣಿನ ತಪಾಸಣಾ ಶಿಬಿರದಲ್ಲಿ ಹಿಂದೆಯೂ ನಮ್ಮ ಸಂಸ್ಥೆ ಕೈಜೋಡಿಸಿರುವುದು ಸಂತಸದ ವಿಷಯ. ಮುಂದೆಯೂ ಜನಪರ ಕಾರ್ಯಕ್ರಮಗಳಲ್ಲಿ ಸಹಕಾರ ಮುಂದುವರಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಶಿಬಿರದ ಯಶಸ್ಸಿಗೆ ಸಹಕರಿಸಿದ ನೇತ್ರ ಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಆಡಳಿತ ವರ್ಗ, ವೈದ್ಯರು, ಸಿಬ್ಬಂದಿ ಹಾಗೂ ಸಹಭಾಗಿತ್ವ ನೀಡಿದ ಎಲ್ಲಾ ಸಂಸ್ಥೆಗಳ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಗೋಪಾಲ್ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಪಿ.ಆರ್.ಓ. ಮನೋಹರ್, ವೈದ್ಯಾಧಿಕಾರಿ ಡಾ. ಶಿಲ್ಪಾ ಉಪಸ್ಥಿತರಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ಘಟಕದ ಅಧ್ಯಕ್ಷ ಸಿದ್ದಿಕ್ ನೀರಾಜೆ ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಕುಸುಮ್‌ರಾಜ್ ವಂದಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ತುಂಬೆ ಶಾಖೆಯ ಶಾಖಾಧಿಕಾರಿ ಧನಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.

ಶಿಬಿರದಲ್ಲಿ 105 ಮಂದಿಗೆ ಉಚಿತ ನೇತ್ರ ತಪಾಸಣೆ ನಡೆಸಲಾಗಿದ್ದು, 52 ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!