
ಪುತ್ತೂರು: ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿ ಲಕ್ಷಾಂತರ ಮಂದಿಗೆ ವಿದ್ಯಾಭ್ಯಾಸ ನೀಡಿರುವ ದರ್ಬೆ ಲಿಟ್ಸ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವದ ಹೊಸ್ತಿಲಲ್ಲಿದ್ದು, ಅದರ ಭಾಗವಾಗಿ ‘ಶತ ನೆನಪಿನೊಂದಿಗೆ ಶತ ಹೆಜ್ಜೆ – ಶಾಲಾ ನಡಿಗೆ ಹಿರಿಯ ವಿದ್ಯಾರ್ಥಿಗಳ ಕಡೆಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಹಿರಿಯ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನಕ್ಕೆ ಡಿ.17ರಂದು ಚಾಲನೆ ನೀಡಿತು.
ಬೆಥನಿ ಶಿಕ್ಷಣ ಮಂಡಳಿಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ, ಶಾಲೆಯ ಹಿರಿಯ ವಿದ್ಯಾರ್ಥಿನಿಯಾಗಿರುವ ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ. ಗೌರಿ ಪೈ ಅವರ ಕಲ್ಲಾರೆಯಲ್ಲಿರುವ ನಿವಾಸಕ್ಕೆ ಭೇಟಿ ನೀಡುವ ಮೂಲಕ ಆರಂಭಿಸಲಾಯಿತು. ಡಾ. ಗೌರಿ ಪೈ ಅವರು ಸಂಪರ್ಕ ಅಭಿಯಾನದ ಕರಪತ್ರ ಬಿಡುಗಡೆ ಮಾಡಿ, ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಉದ್ದೇಶದ ‘ಶತ ಹೆಜ್ಜೆ’ ವಾಟ್ಸಪ್ ಗುಂಪಿಗೆ ತಮ್ಮ ಸಂಖ್ಯೆಯನ್ನು ಸೇರಿಸುವ ಮೂಲಕ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಲಿಟ್ಸ್ ಫ್ಲವರ್ ಶಾಲೆ ನಮ್ಮದೇ ಶಾಲೆ. ಇಲ್ಲಿ ಕಲಿತ ನೆನಪು ಮತ್ತು ಅಭಿಮಾನ ಸದಾ ನಮ್ಮೊಳಗೆ ಜೀವಂತವಾಗಿದೆ. ಶಾಲೆಯ ಅಭಿವೃದ್ಧಿಗೆ ನಮ್ಮ ಸಹಕಾರ ಮತ್ತು ಬೆಂಬಲ ಸದಾ ಇರಲಿದೆ. ಕಾರ್ಯಕ್ರಮಗಳು ಯಶಸ್ವಿಯಾಗಿ ಸಾಗಲಿ,” ಎಂದು ಶುಭ ಹಾರೈಸಿದರು.
ನಂತರ ಶಾಲಾ ಪ್ರತಿನಿಧಿಗಳು ಹಲವು ಹಿರಿಯ ವಿದ್ಯಾರ್ಥಿಗಳ ಮನೆ ಮನೆ ಸಂಪರ್ಕ ನಡೆಸಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್., ರಕ್ಷಕ–ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ ಸುವರ್ಣ, ಸದಸ್ಯ ಜಯರಾಮ್ ಆಚಾರ್ಯ, ಮಾಜಿ ಉಪಾಧ್ಯಕ್ಷ ಹಾಗೂ ಸಮಿತಿ ಅಧ್ಯಕ್ಷ ಚೇತನ್ ಮೊಟ್ಟೆತಡ್ಕ, ನಿವೃತ್ತ ಮುಖ್ಯಶಿಕ್ಷಕಿ ಭಗಿನಿ ಗ್ರೇಸಿ ಮೋನಿಕಾ ಸಾಂತ್ ಮಯೂರ್, ನಿವೃತ್ತ ಶಿಕ್ಷಕರಾದ ಕೆ.ಪಿ. ಜೋಸೆಫ್, ರೋಸ್ಲಿನ್ ಡಿಸಿಲ್ವ, ಸಬೀನಾ ಲಸ್ರಾದೋ, ಮೇರಿ ಡಿಸಿಲ್ವ, ಡೋರತಿ ಮೇರಿ ಡಿಸೋಜ, ಲೀಡಿಯಾ ಮರಿಯಾ ರಸ್ಕಿನ್ಹಾ, ಶಾಲಾ ಮುಖ್ಯಶಿಕ್ಷಕಿ ಭಗಿನಿ ಐರಿನ್ ವೇಗಸ್, ಶಿಕ್ಷಕರಾದ ಭಗಿನಿ ಜೆಸಿಂತಾ ಪ್ರಿಫೆಲ್ಲ ಡೇಸ, ಅಲ್ಫ್ರೆಡ್ ಫೆರ್ನಾಂಡಿಸ್ ಹಾಗೂ ಬಾಲಕೃಷ್ಣ ರೈ ಪೊರ್ದಾಲ್ ಉಪಸ್ಥಿತರಿದ್ದರು.
1928ರಲ್ಲಿ ಸ್ಥಾಪಿತವಾದ ಲಿಟ್ಸ್ ಫ್ಲವರ್ ಶಾಲೆ ಪ್ರಸ್ತುತ 98ನೇ ಶೈಕ್ಷಣಿಕ ವರ್ಷದಲ್ಲಿ ಮುನ್ನಡೆಯುತ್ತಿದ್ದು, 2028ರಲ್ಲಿ ಶತಮಾನೋತ್ಸವ ಆಚರಿಸಲಿದೆ. ಇದರ ಅಂಗವಾಗಿ ಮುಂಬರುವ ಫೆಬ್ರವರಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ, ನಂತರ ಏಪ್ರಿಲ್‌ನಲ್ಲಿ ಸಾವಿರಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಮಹಾಸಮ್ಮೇಳನ ಆಯೋಜಿಸುವ ಯೋಜನೆ ರೂಪಿಸಲಾಗಿದೆ. 2028ರಲ್ಲಿ ಅದ್ದೂರಿಯಾಗಿ ಶತಮಾನೋತ್ಸವ ಸಂಭ್ರಮಾಚರಣೆ ನಡೆಯಲಿದ್ದು, ಮನೆ ಮನೆ ಸಂಪರ್ಕ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.





