ಪುತ್ತೂರು:ಆನ್‌ಲೈನ್ ಮಾರುಕಟ್ಟೆ ಹಾಗೂ ದೇಶವ್ಯಾಪಿ ದೊಡ್ಡ ಸಂಸ್ಥೆಗಳ ಭಾರೀ ರಿಯಾಯಿತಿ, ಉಚಿತ ಕೊಡುಗೆಗಳಿಂದಾಗಿ ಸಣ್ಣ ಹಾಗೂ ಮಧ್ಯಮ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯ ವ್ಯಾಪಾರ ವೃದ್ಧಿಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಗ್ರಾಹಕರನ್ನು ಆಕರ್ಷಿಸಿ ವ್ಯಾಪಾರ ಚಟುವಟಿಕೆಗಳಿಗೆ ಚೈತನ್ಯ ತುಂಬುವ ಉದ್ದೇಶದಿಂದ **‘ಪುತ್ತೂರು ವ್ಯಾಪಾರ ಹಬ್ಬ’**ವನ್ನು ಆಯೋಜಿಸಲಾಗಿದ್ದು, ಗಿಫ್ಟ್ ಕೂಪನ್ ಮೂಲಕ ಬಹುಮಾನ ಮತ್ತು ಬಂಪರ್ ಬಹುಮಾನ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿಯಿಂದ ಎರಡು ತಿಂಗಳ ಕಾಲ ಈ ಯೋಜನೆ ಜಾರಿಯಲ್ಲಿದ್ದು, ಪ್ರತಿವಾರ ಅದೃಷ್ಟ ಕೂಪನ್ ಡ್ರಾ ನಡೆಯಲಿದೆ. ಗ್ರಾಹಕರಿಗೆ 5ಜಿ ಮೊಬೈಲ್ ಸೆಟ್, ಬೈಕ್, ಟಿವಿ, ಫ್ರಿಜ್, ಕ್ಯಾಶ್‌ಬ್ಯಾಕ್ ಸೇರಿದಂತೆ ಸಮಾಧಾನಕರ ಬಹುಮಾನಗಳಿದ್ದು, ಅಂತಿಮವಾಗಿ ಬಂಪರ್ ಬಹುಮಾನವಾಗಿ ಒಂದು ಮಾರುತಿ ಸುಜುಕಿ ಕಾರು ನೀಡಲಾಗುತ್ತದೆ ಎಂದರು.

ವ್ಯಾಪಾರ ಪುನಶ್ಚೇತನಕ್ಕೆ ಯೋಜನೆ

ನಗರದ ಪೇಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ವ್ಯಾಪಾರ ಸಂಪೂರ್ಣ ಕುಂಠಿತಗೊಂಡಿದ್ದು, ಆನ್‌ಲೈನ್ ವ್ಯವಹಾರಗಳು, ದೊಡ್ಡ ಸಂಸ್ಥೆಗಳ ಆಫರ್‌ಗಳು ಹಾಗೂ ಸರಕಾರದಿಂದ ವರ್ಷಾವಾರು ವಿಧಿಸಲಾಗುವ ಹೆಚ್ಚುವರಿ ತೆರಿಗೆಗಳು ವರ್ತಕರಿಗೆ ತೀವ್ರ ಹೊರೆ ಆಗಿವೆ. ಇದರ ಪರಿಣಾಮವಾಗಿ ಕೆಲವರು ತಮ್ಮ ಸಂಸ್ಥೆಗಳನ್ನು ಮುಚ್ಚುವ ಪರಿಸ್ಥಿತಿಗೂ ತಲುಪಿದ್ದಾರೆ. ಇದೇ ವೇಳೆ ನಗರದಲ್ಲಿ ನಡೆಯುವ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಿಗೆ ವರ್ತಕರೇ ಆರ್ಥಿಕ ಬೆಂಬಲ ನೀಡುತ್ತಿದ್ದು, ಆನ್‌ಲೈನ್ ವ್ಯಾಪಾರದಿಂದ ಸ್ಥಳೀಯ ವ್ಯಾಪಾರಕ್ಕೆ ನಷ್ಟವಾಗುತ್ತಿರುವುದು ವಿಪರ್ಯಾಸವಾಗಿದೆ ಎಂದು ಅವರು ಹೇಳಿದರು.

ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಪುತ್ತೂರು ಪೇಟೆಯ ಎಲ್ಲಾ ವರ್ತಕರ ಬೇಡಿಕೆಯಂತೆ ವ್ಯಾಪಾರ ವೃದ್ಧಿಗೆ ವಿಶೇಷ ಹಾಗೂ ನಿಗದಿತ ಅವಧಿಯ ಯೋಜನೆ ರೂಪಿಸಲಾಗಿದೆ. ವರ್ತಕರು ಸಂಘದಿಂದ ಕೂಪನ್ ಪಡೆದು ತಮ್ಮ ಗ್ರಾಹಕರಿಗೆ ವಿತರಿಸಲಿದ್ದು, ಎರಡು ತಿಂಗಳ ಅವಧಿಯಲ್ಲಿ ಡ್ರಾ ಮೂಲಕ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ

ಈ ಸಂದರ್ಭದಲ್ಲಿ ಪುತ್ತೂರು ವ್ಯಾಪಾರ ಹಬ್ಬದ ಸಂಚಾಲಕ ಶಶಿರಾಜ್ ರೈ, ಖಜಾಂಚಿ ಜಾನ್ ಕುಟಿನ್ಹಾ, ಸಂಚಾಲಕ ಎಂ.ಜಿ. ರಫೀಕ್, ವರ್ತಕ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ, ನಿರ್ದೇಶಕ ಶ್ರೀಕಾಂತ್ ಕೊಳತ್ತಾಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!