ಪುತ್ತೂರು: ಯುವಜನತೆಯಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಚೇತನೆಯನ್ನು ಉತ್ತೇಜಿಸುವ ಉದ್ದೇಶದಿಂದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜ.12 ಮತ್ತು 13ರಂದು ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಈ ಸಂದರ್ಭದಲ್ಲಿ 20 ಸಾವಿರ ಕಂಠಗಳ ಸಮೂಹ ಗಾಯನ ಹಾಗೂ ಶತ ಜಯಘೋಷ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಹೇಳಿದರು.
ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಬಂದಿರುವ ವಿವೇಕಾನಂದ ವಿದ್ಯಾಸಂಸ್ಥೆಗಳು ಪ್ರತಿವರ್ಷ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿವೆ. ಈ ವರ್ಷದ ಕಾರ್ಯಕ್ರಮ ಜ.12ರಂದು ಬೆಳಿಗ್ಗೆ 9.30ಕ್ಕೆ ನೆಹರುನಗರದ ವಿವೇಕಾನಂದ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ದಕ್ಷಿಣ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
20 ಸಾವಿರ ಕಂಠಗಳ ಸಮೂಹ ಗಾಯನ:
ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ವಂದೇ ಮಾತರಂ ಸೇರಿದಂತೆ ನಾಲ್ಕು ದೇಶಭಕ್ತಿ ಗೀತೆಗಳನ್ನು 20 ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ಹಾಡಲಿದ್ದಾರೆ. ವಿವೇಕಾನಂದ ಕಾಲೇಜಿನ ಆವರಣದಲ್ಲಿ 10 ಸಾವಿರ ವಿದ್ಯಾರ್ಥಿಗಳು ಹಾಗೂ ಗ್ರಾಮಾಂತರ ಶಾಲೆಗಳ 10 ಸಾವಿರ ವಿದ್ಯಾರ್ಥಿಗಳು ಈ ಸಮೂಹ ಗಾಯನದಲ್ಲಿ ಭಾಗವಹಿಸಲಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಸ್ಮರಣೀಯಗೊಳಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಸಂಘ ಶತಾಬ್ದಿ ನೃತ್ಯರೂಪಕ:
ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಘ ಶತಾಬ್ದಿಯ ಅಂಗವಾಗಿ ಸಂಸ್ಥೆಯ ಬೆಳವಣಿಗೆಯ ಹಾದಿಯನ್ನು ನೃತ್ಯರೂಪಕದ ಮೂಲಕ ಪ್ರದರ್ಶಿಸಲಾಗುವುದು. ವಿವಿಧ ನೃತ್ಯಗಳು, ಗೀತೆಗಳು ಹಾಗೂ ನಾಟಕಗಳನ್ನು ಒಳಗೊಂಡ ಕಾರ್ಯಕ್ರಮ ಇರಲಿದೆ.
ಜ.13ರಂದು ಶತ ಜಯಘೋಷ್:
ವಿದ್ಯಾರ್ಥಿಗಳಲ್ಲಿ ಸಾಮೂಹಿಕತೆ ಬೆಳೆಸುವ ದೃಷ್ಟಿಯಿಂದ ಪುತ್ತೂರು ನಗರದಲ್ಲಿ ಮೊದಲ ಬಾರಿಗೆ ವಿವೇಕಾನಂದ ವಿದ್ಯಾಸಂಸ್ಥೆಗಳ 1,500 ವಿದ್ಯಾರ್ಥಿಗಳ ಶತ ಜಯಘೋಷ್ ನಡೆಯಲಿದೆ. 40 ವಿದ್ಯಾರ್ಥಿಗಳಂತೆ 15 ತಂಡಗಳನ್ನು ರಚಿಸಲಾಗಿದ್ದು, ಪ್ರತೀ ತಂಡದಲ್ಲಿ ಸಂಗೀತ ಪರಿಕರಗಳೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ತಂಡಗಳ ಮುಂಭಾಗದಲ್ಲಿ ಭಗವಾಧ್ವಜ ಹಾಗೂ ಹಿಂದೆ ಪ್ರಮುಖ್ ಘೋಷ್ ಇರಲಿದ್ದು, ಮಧ್ಯದಲ್ಲಿ ಭಾರತಮಾತೆಯ ಟ್ಯಾಬ್ಲೊ ಇರಲಿದೆ. 6ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಕೊಂಬೆಟ್ಟು ಹಾಗೂ ಕಲ್ಲಾರೆ ಬಳಿಯಿಂದ ಏಕಕಾಲಕ್ಕೆ ಆರಂಭವಾಗುವ ಶತ ಜಯಘೋಷ್ ಶ್ರೀಧರ್ ಭಟ್ ಅಂಗಡಿಯ ಮುಂಭಾಗದಲ್ಲಿ ಸೇರಿ, ಬಳಿಕ ಮಹಾಲಿಂಗೇಶ್ವರ ದೇವಳದ ರಥಬೀದಿಯಲ್ಲಿ ಐದು ನಿಮಿಷ ವಿವಿಧ ಸಂಗೀತ ವಾದ್ಯಗಳ ನಾದದೊಂದಿಗೆ ಸಮಾಪನಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಪಿ., ಕೋಶಾಧಿಕಾರಿ ಎಚ್. ಅಚ್ಚುತ ನಾಯಕ್, ನಿರ್ದೇಶಕಿ ಡಾ. ಸುಧಾ ಎಸ್. ರಾವ್, ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಸಾದ್ ಬೊಟ್ಯಾಡಿ ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!