
ಪುತ್ತೂರು: ಪುತ್ತೂರಿನ ಸಮಾಜ ಸೇವಕಿ ಹಾಗೂ ಧಾರ್ಮಿಕ ಮುಂದಾಳು ನರಿಮೊಗರು ಗ್ರಾಮದ ಮುಂಡೂರು ಕೆರೆಮನೆ ನಿವಾಸಿ ನಳಿನಿ ಲೋಕಪ್ಪ ಗೌಡ (74) ಅವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 12ರಂದು ಬೆಳಗ್ಗೆ ನಿಧನರಾದರು.
ನಳಿನಿ ಲೋಕಪ್ಪ ಗೌಡ ಅವರು ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 2008ರಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷೆಯಾಗಿ ಅವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನೆರವೇರಿತ್ತು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು.
2005ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು. 2010ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು.
ಮೃತರು ಪತಿ ಲೋಕಪ್ಪ ಗೌಡ, ಇಬ್ಬರು ಪುತ್ರರು, ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.







