ಉಪ್ಪಿನಂಗಡಿ: ಫೆ. 9ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುಡಿಆರ್ 07/2026 ಪ್ರಕರಣವನ್ನು ವೈದ್ಯಕೀಯ ವರದಿ ಆಧರಿಸಿ ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದ್ದು, ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಸಿ. ವರ್ಗೀಸ್ (73) ಅವರು ತಲೆಗೆ ಉಂಟಾದ ಗಂಭೀರ ಹಲ್ಲೆ ಹಾಗೂ ದೇಹದ ಇತರ ಭಾಗಗಳ ಗಾಯಗಳಿಂದ ಮೃತಪಟ್ಟಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ, ಪೊಲೀಸರು ಫೆ. 13ರಂದು ಪ್ರಕರಣವನ್ನು ಅ.ಕ್ರ. 21/2026 u/s 103(1) BNS-2023 ಅಡಿಯಲ್ಲಿ ಮರುದಾಖಲಿಸಿ ತನಿಖೆ ಆರಂಭಿಸಿದರು.
ತನಿಖೆಯಲ್ಲಿ ಬಹಿರಂಗವಾದ ಮಾಹಿತಿಯ ಪ್ರಕಾರ, ಮೃತ ವರ್ಗೀಸ್ ಅವರು ತಮ್ಮ ಪತ್ನಿಗೆ ಹಲ್ಲೆ ನಡೆಸಿದ್ದರು. ಇದರಿಂದ ಮನೆಯಿಂದ ಹೊರಗೆ ತೆರಳಿದ್ದ ಪತ್ನಿಯನ್ನು ಗಮನಿಸಿದ ವ್ಯಕ್ತಿಯೋರ್ವ ಈ ವಿಚಾರವನ್ನು ಆಕೆಯ ಮಗ ಕೆ.ವಿ. ತೋಮಸ್ ಅವರಿಗೆ ತಿಳಿಸಿದ್ದನು. ತಕ್ಷಣ ತೋಮಸ್ ಅವರು ಪರಿಚಯದ ಆಟೋ ರಿಕ್ಷಾ ಚಾಲಕನ ಮೂಲಕ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು.
ಆಸ್ಪತ್ರೆಗೆ ಬಂದ ಪತ್ನಿಯ ತಮ್ಮ ರಾಜು, ಈ ವಿಷಯವನ್ನು ತನ್ನ ಸಹೋದರ ಚಾಕೊಚ್ಚನಿಗೆ ದೂರವಾಣಿ ಮೂಲಕ ತಿಳಿಸಿ ಮನೆಗೆ ಬರಲು ಕರೆದಿದ್ದನು. ಬಳಿಕ ತೋಮಸ್ ಜೊತೆ ಮಾತುಕತೆ ನಡೆಸಿ ವರ್ಗೀಸ್ ಅವರನ್ನು ಹೆದರಿಸುವ ಉದ್ದೇಶದಿಂದ ರಾಜು ಮತ್ತು ಚಾಕೊಚ್ಚ ಅವರು ಮನೆ ಒಳಗೆ ಹೋಗಿ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಹೊರಬಂದು ತೋಮಸ್ ಅವರಿಗೆ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿ ತೆರಳಿದ್ದರು.
ಆಸ್ಪತ್ರೆಯಲ್ಲಿ ತೋಮಸ್ ಅವರು ತಂದೆ ಮಂಚದಿಂದ ಬಿದ್ದು ಕಲ್ಲಿಗೆ ತಲೆತಾಗಿ ಮೃತಪಟ್ಟಿರಬಹುದು ಎಂದು ಮೊದಲಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸ್ ತನಿಖೆಯಲ್ಲಿ ಹಲ್ಲೆ ಪ್ರಕರಣ ಬಹಿರಂಗಗೊಂಡಿದೆ.
ಈ ಸಂಬಂಧ ಕೆ.ವಿ. ತೋಮಸ್ @ ವಿಲ್ಸನ್ (39), ಸಿ.ಟಿ. ರಾಜು @ ವರ್ಗೀಸ್ (59), ಚಾಕೊಚ್ಚ (51) ಅವರನ್ನು ಬಂಧಿಸಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!