
ಹನುರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶಾಸ್ತ್ರ ಹೇಳುವ ನೆಪದಲ್ಲಿ ಗಿಳಿಗಳನ್ನು ಅಕ್ರಮವಾಗಿ ಪಂಜರದಲ್ಲಿ ಬಂಧಿಸಿ ಬಳಸುತ್ತಿದ್ದ ನಾಲ್ವರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತರು ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂ ಮೂಲದ ಗಣೇಶ್, ವಿಕ್ರಮ್, ಸರಿಯಾಜಿ ಹಾಗೂ ಗುರುಸ್ವಾಮಿ ಎಂದು ಗುರುತಿಸಲಾಗಿದೆ.
ಗಣೇಶ್ ಮತ್ತು ವಿಕ್ರಮ್ ಅವರು ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನ ಸಮೀಪ ಸಾರ್ವಜನಿಕರು ಸಂಚರಿಸುವ ಪ್ರದೇಶದಲ್ಲಿ ಗಿಳಿಗಳನ್ನು ಇರಿಸಿಕೊಂಡು ಶಾಸ್ತ್ರ ಹೇಳುತ್ತಾ ಕುಳಿತಿದ್ದರು. ಉಳಿದ ಇಬ್ಬರು ಲಾಡು ತಯಾರಿಕಾ ಘಟಕದ ಸಮೀಪ ಇದೇ ರೀತಿಯ ಚಟುವಟಿಕೆಯಲ್ಲಿ ತೊಡಗಿದ್ದರು.
ಸಂದೇಹಾಸ್ಪದವಾಗಿ ಕಂಡ ಹಿನ್ನೆಲೆಯಲ್ಲಿ ಅರಣ್ಯ ಸಂಚಾರಿ ದಳದ ಪೊಲೀಸರು ವಿಚಾರಣೆ ನಡೆಸಿದಾಗ, ಗಿಳಿಗಳನ್ನು ಅಕ್ರಮವಾಗಿ ಬಂಧಿಸಿ ಬಳಸುತ್ತಿರುವುದು ದೃಢಪಟ್ಟಿದೆ. ಬಳಿಕ 8 ಗಿಳಿಗಳನ್ನು ವಶಕ್ಕೆ ಪಡೆದು, ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.







