ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನೆನ್ನೆ ಪೊಲೀಸ್ ಕಿರುಕುಳಕ್ಕೆ ವಿಧವೆ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಡೆದಿತ್ತು. ಇದೀಗ ಇಂತಹದೇ ಮತ್ತೊಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಏಳು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಅಕ್ರಮ ಸಂಬಂಧ ಮತ್ತು ಆಕೆ ತನ್ನ ವಿರುದ್ಧವೇ ನೀಡಿದ ಸುಳ್ಳು ದೂರಿನಿಂದ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೃತ್ತಿಯಲ್ಲಿ ಚಾಲಕನಾಗಿದ್ದ ಮನು, ಸಖರಾಯಪಟ್ಟಣ ಮೂಲದ ಹರಿಣಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ದಾಂಪತ್ಯ ಜೀವನ ಸುಗಮವಾಗಿಯೇ ಸಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ನಿ ಹರಿಣಿಗೆ ಪಕ್ಕದ ಮನೆಯ ಅಶೋಕ್ ಎಂಬಾತನ ಜೊತೆ ಸಲುಗೆ ಬೆಳೆದಿತ್ತು.

ಕಳೆದ ರಾತ್ರಿ ಮನು ತನ್ನ ಪತ್ನಿಯ ಮೊಬೈಲ್‌ನಲ್ಲಿ ಅಶೋಕ್ ಕಳುಹಿಸಿದ್ದ ಸಂದೇಶಗಳನ್ನು ನೋಡಿದ್ದನು. ಇದೇ ವಿಚಾರವಾಗಿ ಮನು ಮತ್ತು ಅಶೋಕ್ ನಡುವೆ ತೀವ್ರ ಗಲಾಟೆ ನಡೆದಿದೆ. ಈ ವೇಳೆ ಅಶೋಕ್, “ನಿನ್ನ ಹೆಂಡತಿ ಜೊತೆ ನನಗೆ ಸಂಬಂಧ ಇರುವುದು ನಿಜ” ಎಂದು ಹೇಳಿ ಮನುಗೆ ಅವಮಾನ ಮಾಡಿದ್ದಾನೆ ಎನ್ನಲಾಗಿದೆ. ಈ ಗಲಾಟೆಯ ಬೆನ್ನಲ್ಲೇ ಪತ್ನಿ ಹರಿಣಿ, ಗಂಡ ಮನು ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಗಂಡ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಳು. ಪೊಲೀಸರು ವಿಚಾರಣೆಗೆ ಕರೆದಾಗ, ಇಡೀ ಊರಿನ ಮುಂದೆ ತನ್ನ ಮರ್ಯಾದೆ ಹೋಯಿತು ಎಂದು ಮನು ತೀವ್ರವಾಗಿ ನೊಂದಿದ್ದನು.

ಮರ್ಯಾದೆಗೆ ಹೆದರಿದ ಮನು ಅಂತಿಮವಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. “ನನ್ನ ಮಗನ ಸಾವಿಗೆ ಆತನ ಪತ್ನಿ ಹರಿಣಿ ಮತ್ತು ಅಶೋಕ್ ಅವರೇ ನೇರ ಕಾರಣ. ಅವರಿಬ್ಬರ ಅಕ್ರಮ ಸಂಬಂಧವೇ ಈ ದುರಂತಕ್ಕೆ ನಾಂದಿ ಹಾಡಿದೆ” ಎಂದು ಮನುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೋಷಕರ ದೂರಿನ ಮೇರೆಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!